
ಲಂಡನ್: ಇಂಗ್ಲೆಂಡಿನ ವ್ಯಕ್ತಿಯೊಬ್ಬ ಒಂದು ವರ್ಷದ ಬಳಿಕ, ತಾನು ತನ್ನ ಹೆಂಡತಿಯ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಕೊಂದ ಬಳಿಕ ಈತ ಆಕೆಯ ದೇಹವನ್ನು ಕೊಚ್ಚಿ 200 ಪೀಸ್‌ಗಳಾಗಿ ಮಾಡಿ ವಿಲೇವಾರಿ ಮಾಡಿದ್ದ. ಕೊಲೆಯ ಬಳಿಕ ಈತ ಇಂಟರ್‌ನೆಟ್‌ನಲ್ಲಿ ಸರ್ಚ್ (Online Searches) ಮಾಡಿದ ವಿಷಯಗಳೂ ಅಷ್ಟೇ ಚಿತ್ರವಿಚಿತ್ರವಾಗಿವೆ!

28 ವರ್ಷದ ನಿಕೋಲಸ್ ಮೆಟ್ಸನ್ ಸುಮಾರು ಒಂದು ವರ್ಷದ ವಿಚಾರಣೆಯ ಬಳಿಕ, ತನ್ನ ಹೆಂಡತಿಯನ್ನು ಕೊಲೆ (murder case) ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. 2023ರಲ್ಲಿ ಈತನ ಹೆಂಡತಿಯ ದೇಹವನ್ನು ಪತ್ತೆ ಹಚ್ಚಲಾಗಿತ್ತು. ಆದರೆ ಫೆಬ್ರವರಿಯಲ್ಲಿ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಅವನು ಅಪರಾಧವನ್ನು ಒಪ್ಪಿಕೊಂಡ.
ಈತನ ಪತ್ನಿ ಹೋಲಿ ಬ್ರಾಮ್ಲಿ (26) ಅನ್ನು ಕೊಂದ ನಂತರ ಮೆಟ್ಸನ್ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೆಲ್ಲ ಹಿಂತೆಗೆದುಕೊಂಡಿದ್ದ. “ನನ್ನ ಹೆಂಡತಿ ಸತ್ತರೆ ನಾನು ಏನು ಪ್ರಯೋಜನ ಪಡೆಯುತ್ತೇನೆ?” ಮತ್ತು “ಆಕೆ ಸತ್ತ ನಂತರ ಆಕೆಯ ಆತ್ಮ ನನ್ನನ್ನು ಕಾಡಬಹುದೇ?” ಎಂಬ ಪ್ರಶ್ನೆಗಳನ್ನು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದ್ದಾನೆ. “ಮೃತ ದೇಹವನ್ನು ವಿಲೇವಾರಿ ಮಾಡುವುದು ಹೇಗೆ?” ಮತ್ತು “ದೇವರು ಕೊಲೆಯನ್ನು ಕ್ಷಮಿಸುತ್ತಾನೆಯೇ?” ಮುಂತಾದ ವಿಷಯಗಳ ಬಗ್ಗೆ ಕೂಡ ಈತ ಹುಡುಕಿದ್ದಾನೆ.

ಕೊಲೆ ನಡೆಯುವ ಮೊದಲು ಮೆಟ್ಸನ್ ಮತ್ತು ಬ್ರಾಮ್ಲಿ ಡಿವೋರ್ಸ್ ಪಡೆಯುವ ಹಂತದಲ್ಲಿದ್ದರು. ಮೆಟ್ಸನ್ ತನ್ನ ಕಟುಕತನಕ್ಕೆ ಕಾರಣವನ್ನು ನೀಡಿಲ್ಲ. ವಿಚಾರಣೆಯ ಸಮಯದಲ್ಲಿ, ಮೆಟ್ಸನ್ ಅವನ ಸ್ನೇಹಿತನಾದ ಜೋಶುವಾ ಹ್ಯಾನ್ಕಾಕ್ ಎಂಬ ಇನ್ನೊಬ್ಬ ವ್ಯಕ್ತಿ, ಪತ್ನಿಯ ದೇಹವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದನ್ನು ಒಪ್ಪಿಕೊಂಡ. ಮೆಟ್ಸನ್ ತನ್ನ ಹೆಂಡತಿಯ ದೇಹವನ್ನು 200ಕ್ಕೂ ಅಧಿಕ ತುಂಡುಗಳಾಗಿ ಕೊಚ್ಚಿಹಾಕಿ ಅದನ್ನು ಒಂದು ವಾರ ತನ್ನ ಫ್ಲಾಟ್‌ನಲ್ಲಿ ಇರಿಸಿಕೊಂಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಬ್ರಾಮ್ಲಿಯ ದೇಹ ಮಾರ್ಚ್ 2023ರಲ್ಲಿ ನದಿಯಲ್ಲಿ ಪತ್ತೆಯಾಗಿತ್ತು. ದಾರಿಹೋಕನೊಬ್ಬ ನೀರಿನಲ್ಲಿ ತೇಲುತ್ತಿರುವ ಪ್ಲಾಸ್ಟಿಕ್ ಚೀಲಗಳನ್ನು ಗಮನಿಸಿದ್ದ. ಅವುಗಳಲ್ಲಿ ಒಂದು ಮಾನವ ಕೈಯನ್ನು ಹೊಂದಿತ್ತು. ನಂತರ ಅಧಿಕಾರಿಗಳು ದೇಹದ 224 ತುಣುಕುಗಳನ್ನು ಪತ್ತೆಹಚ್ಚಿದರು. ಆದರೆ ಕೆಲವು ಭಾಗಗಳು ಪತ್ತೆಯಾಗಿಲ್ಲ.

ಬ್ರಾಮ್ಲಿಯ ದೇಹವು ಪತ್ತೆಯಾಗುವ ಮೊದಲು, ಆಕೆಯ ಕುಟುಂಬವು ಒಂದು ವರ್ಷದಿಂದ ಅವಳನ್ನು ನೋಡಿರಲಿಲ್ಲ. ಮೆಟ್ಸನ್ ಈ ಬಗ್ಗೆ ನಿಗೂಢತೆ ಕಾಪಾಡಿಕೊಂಡಿದ್ದ. ಇಂಗ್ಲೆಂಡ್‌ನ ಲಿಂಕನ್‌ನ ಮೆಟ್ಸನ್, ಪ್ರಾಣಿ ಹಿಂಸೆ ಮಾಡಿದ ಹಿಸ್ಟರಿ ಹೊಂದಿದ್ದಾನೆ. ತನ್ನ ಹಿಂದಿನ ಸಂಗಾತಿಗಳ ಮೇಲೂ ಈತ ಅಪರಾಧ ಎಸಗಿದ್ದ. ಹೆಂಡತಿಯನ್ನು ಕೊಲ್ಲುವ ಮೊದಲು, ಆಕೆಯ ಸಾಕುಪ್ರಾಣಿಗಳನ್ನು ಕೂಡ ತುಂಬ ಕ್ರೂರವಾಗಿ ಪೀಡಿಸಿ ಕೊಂದಿರುವುದು ಗೊತ್ತಾಗಿದೆ.

ಈತ ಒಮ್ಮೆ ಆಕೆಯ ಹೊಸ ನಾಯಿಮರಿಯನ್ನು ವಾಷಿಂಗ್ ಮಿಷನ್‌ನಲ್ಲಿ ಇರಿಸಿದ್ದ. ಆಕೆ ಸಾಕಿದ ಹ್ಯಾಮ್ಸ್‌ಟರ್‌ಗಳನ್ನು ಆಹಾರದ ಬ್ಲೆಂಡರ್ ಮತ್ತು ಮೈಕ್ರೋವೇವ್‌ನಲ್ಲಿ ಇರಿಸಿ ಕೊಂದಿದ್ದ. ಈತ ಮಾನಸಿಕ ಅಸ್ವಸ್ಥತೆ ಹೊಂದಿದ್ದಾನೆ ಎಂದು ಮೆಟ್ಸನ್‌ನ ವಕೀಲರು ವಾದಿಸಿದ್ದಾರೆ.
