
ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಎರಡನೇ ಬಾರಿ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಲಿದೆ.
ಬೆಂಗಳೂರು (ಏ.08): ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಎರಡನೇ ಬಾರಿ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಲಿದೆ. ಮೋದಿ ಅವರು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಪಕ್ಷದ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದು, ಮಂಗಳೂರಿನಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ

ಇದೀಗ ಮೊದಲ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಭರದ ಪ್ರಚಾರ ಆರಂಭವಾಗಿದೆ. ಟಿಕೆಟ್ ಹಂಚಿಕೆ ಕುರಿತಂತೆ ಉಂಟಾಗಿದ್ದ ಗೊಂದಲಗಳೂ ಹೆಚ್ಚೂ ಕಡಮೆ ಅಂತ್ಯವಾಗಿದೆ. ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದರು. ಅಲ್ಲದೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ರೋಡ್ ಶೋ ಕೂಡ ನಡೆಸಿದ್ದರು. ಈಗ ಪ್ರಧಾನಿ ಮೋದಿ ಅವರು ಪ್ರಚಾರಕ್ಕೆ ಆಗಮಿಸುತ್ತಿರುವುದು ಉಭಯ ಪಕ್ಷಗಳಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದು, ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸುವ ನಿರೀಕ್ಷೆಯಿದೆ.

