
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ಕಡೆ ರೈತರ ಪ್ರತಿಭಟನೆ, ಬಿಜೆಪಿ ವಿರುದ್ಧದ ಅಭಿಯಾನಗಳು ನಡೆಯುತ್ತಿರುವ ಮಧ್ಯೆ ಉತ್ತರ ಭಾರತದ ಶೀತ ಮರುಭೂಮಿಯಾದ ಲಡಾಖ್ನ ರಾಜಧಾನಿ ಲೇಹ್ನಲ್ಲಿ ಮೈ ಕೊರೆವ ಚಳಿಯ ಮಧ್ಯೆ ಬಹುತೇಕ ಬುಡಕಟ್ಟು ಪ್ರತಿಭಟನಾಕಾರರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ತಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿರುವ ಚೀನಾದ ವಿರುದ್ಧ ಲಡಾಖ್ನ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಮೌನವಾಗಿದ್ದಾರೆ, ಭಾರತ ಸರ್ಕಾರ ಮೌನವಾಗಿದೆ ಮತ್ತು ಭಾರತದ ಮಾಧ್ಯಮಗಳು ಚೀನಾ 2,000 ಚದರ ಕಿಮೀ ಭಾರತದ ಭೂಮಿಯನ್ನು ಕಬಳಿಸಿದರೂ ಮೌನವಾಗಿವೆ.

ಲಡಾಖ್ನಲ್ಲಿರುವ ಲೇಹ್ನಲ್ಲಿ, ಹದಿಹರೆಯದವರಿಂದ ಹಿಡಿದು ಹಿರಿಯ ನಾಗರಿಕರವರೆಗೂ ಸೇರಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಬಿಜೆಪಿಯು, ಈ ಹಿಂದಿನ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಯನ್ನು ಈಡೇರಿಸಲು ವಿಫಲವಾಗಿದೆ, ನಮ್ಮ ಭೂಭಾಗದ ಆಕ್ರಮಣ ನಡೆಯುತ್ತಿದೆ ಎಂದು ಸಾವಿರಾರು ಮಂದಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಪ್ರತಿಭಟನೆ ಹಿನ್ನೆಲೆ ಲಡಾಖ್ ಆಡಳಿತವು ಈ ಪ್ರದೇಶದಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ. ಚೀನಾದಿಂದ ಭಾರತದ ಭೂಭಾಗದ ಆಕ್ರಮಣ ಮಾಡಲಾಗಿದೆ ಮತ್ತು ದಕ್ಷಿಣದಲ್ಲಿ ಕಾರ್ಪೊರೇಟ್ಗಳಿಂದ ಸಾವಿರಾರು ಚದರ ಕಿಲೋಮೀಟರ್ಗಳಷ್ಟು ಭೂಮಿಗಳ ಆಕ್ರಮಣ ನಡೆದಿದೆ. ಚಾಂಗ್ಪಾ ಅಲೆಮಾರಿ ಬುಡಕಟ್ಟು ಜನಾಂಗದವರ ದುಃಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಲಡಾಖ್ ಜನರ ಬೇಡಿಕೆಯೇನು?
ಲಡಾಖ್ಗೆ ರಾಜ್ಯ ಸ್ಥಾನಮಾನ, ಲಡಾಖ್ನ್ನು ಆರನೇ ಶೆಡ್ಯೂಲ್ಗೆ ಸೇರಿಸುವುದು, ಲಡಾಖ್ನ ಸ್ಥಳೀಯರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಮತ್ತು ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಸಂಸದೀಯ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಲಾಗಿದೆ
