
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಮತ್ತು ಇತರ ಪ್ರದೇಶಗಳಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ ವಿಷಾಹಾರ ಅಥವಾ ಫುಡ್ ಪಾಯಿಸನ್ ಪ್ರಕರಣಗಳು ಹೆಚ್ಚಾಗತೊಡಗಿವೆ.
ಮಂಗಳೂರು, ಏಪ್ರಿಲ್ 5: ಹೆಚ್ಚುತ್ತಿರುವ ಬಿಸಿಲಿನ ತಾಪ, ನೀರಿನ ಬಿಕ್ಕಟ್ಟು ಇತ್ಯಾದಿ ಕಾರಣಗಳಿಂದಾಗಿ ಮಂಗಳೂರಿನ ಮತ್ತು ಕರಾವಳಿ ಭಾಗದ ಇತರ ಬಹುತೇಕ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಫುಡ್ ಪಾಯಿಸನ್ನ (Food poisoning) ಹಲವು ಪ್ರಕರಣಗಳು ದೃಢಪಡುತ್ತಿವೆ. ದಿನಕ್ಕೆ ಐದಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹೆಚ್ಚುತ್ತಿರುವ ಬಿಸಿಲಿನ ತಾಪ ಮತ್ತು ನೀರಿನ ಗುಣಮಟ್ಟದಲ್ಲಿನ ಬದಲಾವಣೆಗಳು ಈ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಆರೋಗ್ಯ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 100 ಮಂದಿ ಫುಡ್ ಪಾಯಿಸನ್ ಅಥವಾ ವಿಷಾಹಾರ ಸಮಸ್ಯೆಯಿಂದ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವುದಾಗಿ ವರದಿಯಾಗಿದೆ.

ವಿವಿಧ ಕಾರಣಗಳಿಂದ ನಾವು ಸೇವಿಸುವ ಆಹಾರ ವಿಷವಾಗಿ ಪರಿಣಮಿಸುತ್ತದೆ. ಆದರೂ ಕಲುಷಿತ ನೀರು ಮುಖ್ಯ ಕಾರಣ ಎಂದು ಆಯುರ್ ಸ್ಪರ್ಶ ಆಸ್ಪತ್ರೆಯ ಆಹಾರ ಮತ್ತು ಪೌಷ್ಟಿಕಾಂಶ ತಜ್ಞೆ ಸೌಜನ್ಯ ಸತೀಶ್ ಶಂಕರ್ ವಿವರಿಸಿದ್ದಾರೆ. ತಾಪಮಾನ ಪ್ರಮಾಣ ಹೆಚ್ಚುತ್ತಿರುವಾಗ ಹೆಚ್ಚು ನೀರನ್ನು ಸೇವಿಸುವುದು ಅತ್ಯಗತ್ಯ. ಆದರೆ ಅದರ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.

