
ಆದಷ್ಟು ಬೇಗ ಮಗುವನ್ನು ಸುರಕ್ಷಿತವಾಗಿ ಹೊರತರಲಿ ಎಂದು ಕನ್ನಡಿಗರೆಲ್ಲ ಪ್ರಾರ್ಥಿಸುತ್ತಿದ್ದರು. ಎನ್ ಡಿಆರ್ ಎಫ್ ಪ್ರದರ್ಶಿಸಿರುವ ಸಾಹಸ, ಸಮಯಪ್ರಜ್ಞೆ ಮತ್ತು ಸ್ಥಿತಪ್ರಜ್ಞತೆ ಎಷ್ಟು ಕೊಂಡಾಡಿದರೂ ಸಾಲದು. ಮಗುವನ್ನು ಸುರಕ್ಷಿತವಾಗಿ ಹೊರಗ ತಂದು ಮೇಲೆ ತರುತ್ತಿರುವ ರೋಚಕ ದೃಶ್ಯವನ್ನು ಇಲ್ಲಿ ನೋಡಬಹುದು.

ವಿಜಯಪುರ: ಕಳೆದ ಸುಮಾರು 21 ಗಂಟೆಗಳಿಂದ ಸಾತ್ವಿಕ್ ನ ರಕ್ಷಣಾ ಕಾರ್ಯಾಚಣೆ ತೊಡಗಿದ್ದ ಎನ್ ಡಿ ಅರ್ ಎಫ್ ತಂಡ ನಾವ್ಯಾರೂ ನೆನೆಸದ ರೀತಯಲ್ಲಿ ಯಶ ಸಾಧಿಸಿದೆ. ನಿನ್ನೆ ಸಾಯಂಕಾಲ ಕೊಳವೆ ಬಾವಿಯಲ್ಲಿ ಬಿದ್ದು ಸಾವು ಬದುಕಿನೊಂದಿಗೆ ಹೋರಾಟ ನಡೆಸಿದ ಮಗುವನ್ನು ಅವರು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ನಾವು ಸತತವಾಗಿ ವರದಿ ಮಾಡುತ್ತಿರುವ ಹಾಗೆ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿರರುವ ಲಚ್ಯಾಣ ಹೆಸರಿನ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಸುಮಾರು 6 ಗಂಟೆಗೆ ಸಾತ್ವಿಕ್ ಹೆಸರಿನ 2-ವರ್ಷದ ಮಗು ಕೇವಲ ಒಂದು ದಿನದ ಹಿಂದಷ್ಟೇ ಕೊರೆಸಲಾಗಿದ ಕೊಳವೆ ಬಾವಿಯಲ್ಲಿ ಜಾರಿಬಿಟ್ಟಿತ್ತು. ಸತೀಶ್ ಮತ್ತು ಪೂಜಾ ಎನ್ನುವವರ ಮಗು ಸುಮಾರು 20 ಅಡಿ ಆಳದಲ್ಲಿ ಸಿಕ್ಹಾಕಿಕೊಂಡಿತ್ತು. ಆದಷ್ಟು ಬೇಗ ಮಗುವನ್ನು ಸುರಕ್ಷಿತವಾಗಿ ಹೊರತರಲಿ ಎಂದು ಕನ್ನಡಿಗರೆಲ್ಲ ಪ್ರಾರ್ಥಿಸುತ್ತಿದ್ದರು.

ಎನ್ ಡಿಆರ್ ಎಫ್ ಪ್ರದರ್ಶಿಸಿರುವ ಸಾಹಸ, ಸಮಯಪ್ರಜ್ಞೆ ಮತ್ತು ಸ್ಥಿತಪ್ರಜ್ಞತೆ ಎಷ್ಟು ಕೊಂಡಾಡಿದರೂ ಸಾಲದು. ಮಗುವನ್ನು ಸುರಕ್ಷಿತವಾಗಿ ಹೊರಗ ತಂದು ಮೇಲೆ ತರುತ್ತಿರುವ ರೋಚಕ ದೃಶ್ಯವನ್ನು ಇಲ್ಲಿ ನೋಡಬಹುದು. ನಿನ್ನೆಯಿಂದ ಒಂದು ಹನಿ ನೀರು ಬಾಯಿಗೆ ಹಾಕದೆ ರಕ್ಷಣಾ ಕಾರ್ಯಚರಣೆಯನ್ನು ದಿಗಿಲು, ಭಯ ಮತ್ತು ಆತಂಕದಿಂದ ನೋಡುತ್ತಿದ್ದ ಪೂಜಾ ಮತ್ತು ಸತೀಶ್ ದಂಪತಿಗೆ ಆಗಿರುವ ಸಂತೋಷವನ್ನು ಪದಗಳಲ್ಲಿ ಹೇಳುವುದು ಸಾಧ್ಯವೇ?

ಆಪರೇಷನ್ ಸಾತ್ವಿಕ್ ಹೇಗಿತ್ತು?
ಬುಧವಾರ (ಏಪ್ರಿಲ್ 03) ಸಂಜೆ 5.30ರ ಸುಮಾರಿಗೆ ಮಗು ಕೊಳವೆಬಾವಿಗೆ ಬಿದ್ದಿದ್ದು, ಇದಾದ ಅರ್ಧ ಗಂಟೆಯಲ್ಲಿಯೇ ಕಾರ್ಯಾಚರಣೆ ಆರಂಭಿಸಿದ್ದು ಮಗುವಿನ ರಕ್ಷಣೆಯಲ್ಲಿ ಸಿಕ್ಕ ಮೊದಲ ಮುನ್ನಡೆಯಾಗಿದೆ. ಬುಧವಾರ ಸಂಜೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿಯು ಸತತ ಪ್ರಯತ್ನ ಮಾಡಿತು. ರಾತ್ರಿಯೇ ಎರಡು ಹಿಟಾಚಿ, ಮೂರು ಜೆಸಿಬಿ ಯಂತ್ರಗಳ ಮೂಲಕ ಕೊಳವೆಬಾವಿಯ ಸುತ್ತ 20 ಅಡಿ ಅಗೆಯಲಾಯಿತು. ಬಳಿಕ ಕೊಳವೆ ಬಾವಿ ಸಿಕ್ಕಿತು. ಆದ್ರೆ, ಮಗುವಿನ ಹತ್ತಿರ ಹೋಗಲು ಇನ್ನಷ್ಟು ಬಂಡೆಗಳು ಅಡ್ಡಿಯಾಗಿದ್ದವು. ಅದನ್ನು ಸಹ ಸಿಬ್ಬಂದಿ ಹಿಟಾಚಿ ಮತ್ತು ಕೈಯಿಂದ ಡ್ರಿಲ್ಲಿಂಗ್ ಮಾಡಿ ತೆರವುಗೊಳಿಸಿದರು. ಆದ್ದರಿಂದ ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಪ್ರಗತಿ ಕಂಡಿದ್ದು, ರಂಧ್ರ ಕೊರೆದು ಮಗುವಿನ ರಕ್ಷಣೆ ಮಾಡಲು ಸಾಧ್ಯವಾಯಿತು.

ಕ್ಯಾಮರಾ ಸಹಾಯದಿಂದ ಆಮ್ಲಜನಕ ರವಾನೆ
ಗುರುವಾರ ಬೆಳಗ್ಗೆ ಕೊಳವೆಬಾವಿಯ ಬಳಿ ಅಡ್ಡಲಾಗಿ 3 ಅಡಿ ರಂಧ್ರ ಕೊರೆದ ಸಿಬ್ಬಂದಿಯು ಕೃತಕ ಆಮ್ಲಜನಕವನ್ನು ರವಾನಿಸಿತು. ಅಷ್ಟೇ ಅಲ್ಲ, ಮಗುವಿನ ಸ್ಥತಿಗತಿಯನ್ನು ತಿಳಿಯಲು ಸಾತ್ವಿಕ್ ಬಿದ್ದಿದ್ದ ಕೊಳವೆ ಬಾವಿಯೊಳಗೆ ಕ್ಯಾಮೆರಾ ಬಿಡಲಾಗಿತ್ತು. ಆ ಕ್ಯಾಮರಾ ದೃಶ್ಯದಲ್ಲಿ ಸಾತ್ವಿಕ್ ಕಾಲುಗಳನ್ನು ಅಲುಗಾಡಿಸುವುದು ಕಂಡುಬಂದಿತ್ತು. ಇದರೊಂದಿಗೆ ಅದೃಷ್ಟವಶಾತ್ ಸಾತ್ವಿಕ್ ಜೀವಂತವಾಗಿದ್ದಾನೆ ಎನ್ನುವುದು ಎಲ್ಲರಿಗೂ ಖಾತ್ರಿಯಾಗಿತ್ತು. ಎಲ್ಲರ ಮೊಗದಲ್ಲೂ ಕೊಂಚ ನಿರಾಳ ಭಾವ ಮೂಡಿತ್ತು. ಅಲ್ಲದೇ ಮಗುವನ್ನು ಜೀವಂತವಾಗಿ ತರುತ್ತೇವೆಂದು ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸಿಬ್ಬಂದಿ ಕುಟುಂಬಸ್ಥರಿಗೆ ಧೈರ್ಯ ಹೇಳಿ ತಮ್ಮ ಕಾರ್ಯಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಬಳಿಕ ಕ್ಯಾಮೆರಾ ಮೂಲಕ ಮಾನಿಟರ್ ಮಾಡಿ, ಅಡ್ಡ ರಂಧ್ರದ ಮೂಲಕ ಆಮ್ಲಜನಕವನ್ನು ಪೂರೈಸಲಾಯ್ತು.

ಸಾತ್ವಿಕ್ ಬೋರ್‌ವೆಲ್ ಪೈಪ್ ಮಧ್ಯೆ ಸಿಲುಕಿದ್ದ. ಸಿಬ್ಬಂದಿಯು ಯಂತ್ರದ ಮೂಲಕ ರಂಧ್ರ ಕೊರೆಯಲು ಹೋದಾಗ ಅದರ ಶಬ್ದ ಕೇಳಿ ಅಳುತ್ತಿದ್ದ. ಮಗು ಅಳುತ್ತಿರುವ ಶಬ್ದ ಕೇಳಿದಾಗಲೇ ಸಿಬ್ಬಂದಿಗೆ ಧೈರ್ಯ ಬಂದಿತು. ಅಲ್ಲದೇ ನೆರೆದಿದ್ದ ಜನರಲ್ಲಿ ಕೊಂಚ ಸಂತಸ ಮನೆ ಮಾಡಿತ್ತು. ಕುಟುಂಬಸ್ಥರು ಮಗ ಬದುಕಿ ಬರುತ್ತಾನೆ ಎಂದು ಆಶಾಭಾವ ಹೊಂದಿದ್ದರು. ಇನ್ನು ಮಗುವಿನ ಹತ್ತಿರ ಹೋಗಲು ಇನ್ನಷ್ಟು ದೊಡ್ಡ-ದೊಡ್ಡ ಕಲ್ಲು-ಬಂಡೆಗಳು ಅಡ್ಡ ಬಂದಿದ್ದರಿಂದ ಕಾರ್ಯಚರಣೆಗೆ ಕೊಂಚ ವಿಳಂಬವಾಯ್ತು. ಆದರೂ ಸಿಬ್ಬಂದಿ ಮತ್ತೆ ಹಿಟಾಚಿ ಮೂಲಕ ಬಂಡೆಗಳನ್ನು ಡ್ರಿಲ್ ಮಾಡಿ ಚೂರು ಚೂರು ಮಾಡಿ ಮುಂದೆ ಸಾಗಿದರು. ಆಗ ಮಗುವಿನ ತಲೆ ಕಂಡುಬಂದಿತು. ಆದ್ರೆ, ಮಗು ದೇಹ ಪೈಪ್ಗೆ ಒರೆದುಕೊಂಡಿದ್ದರಿಂದ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಸಿಬ್ಬಂದಿ, ಅಡ್ಡ ಇದ್ದ ಬಂಡೆ-ಕಲ್ಲುಗಳನ್ನು ಡ್ರಿಲ್ ಮೂಲಕ ತೆರವುಗೊಳಿಸಿದರು. ಹಾಗೆಯೇ ರಂಧ್ರ ಕೊರೆದರೆ ಮಗುವಿನ ಮೈಮೇಲೆ ಮಣ್ಣು, ಧೂಳು ಬೀಳುವ ಸಾಧ್ಯತೆ ಇತ್ತು. ಅಲ್ಲೂ ಚಾಣಾಕ್ಷತನ ಮೆರೆದ ಅಧಿಕಾರಿಗಳು ವ್ಯಾಕ್ಯೂಮ್ ಕ್ಲೀನರ್ ಮೂಲಕ ಧೂಳನ್ನು ಎಳೆದುಕೊಂಡರು. ಆಗ ಮಗುವನ್ನು ಇನ್ನಷ್ಟು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಯಿತು.
