
ಲಕ್ನೋ: ಗ್ಯಾಂಗ್‍ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿಯವರ (Mukhtar Ansari) ಅಂತ್ಯಸಂಸ್ಕಾರ ಗಾಜಿಪುರದ ಮೊಹಮ್ಮದಾಬಾದ್‍ನ ಕಾಳಿ ಬಾಗ್ ನಲ್ಲಿ ದಫನ ನಡೆಯಿತು.
ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಅನ್ಸಾರಿ ಬೆಂಬಲಿಗರು ಸೇರಿದ್ದರು. ಮುಖ್ತಾರ್, ತಾಯಿಯ ಸಮಾಧಿ ಪಕ್ಕದಲ್ಲಿಯೇ ಅನ್ಸಾರಿಯವರ ಮೃತ ದೇಹವನ್ನು ಸಮಾಧಿ ಮಾಡಲಾಯಿತು. ಅವರ ಮಗ ಉಮರ್ ಅನ್ಸಾರಿ ಮತ್ತು ಸಹೋದರ ಅಫ್ಜಲ್ ಅನ್ಸಾರಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು

ಇದಕ್ಕೂ ಮೊದಲು, ಮುಖ್ತಾರ್ ಪಾರ್ಥೀವ ಶರೀರವನ್ನು ಅವರ ನಿವಾಸದಿಂದ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಬೃಹತ್ ಜನಸಾಗರವೇ ಸೇರಿತ್ತು, ಇದರಿಂದಾಗಿ ಭಾರೀ ಭದ್ರತಾ ವ್ಯವಸ್ಥೆಗಳೊಂದಿಗೆ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು.
ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ?
ಶುಕ್ರವಾರ ತಡರಾತ್ರಿ, ಅನ್ಸಾರಿ ಮರಣೋತ್ತರ ಪರೀಕ್ಷೆಯು ಅವರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ ಎಂದು ವರದಿಯಾಗಿದೆ. ಶವಪರೀಕ್ಷೆಯನ್ನು ಐವರು ವೈದ್ಯರ ಸಮಿತಿ ನಡೆಸಿದ್ದು, ಪರೀಕ್ಷೆಯ ನಂತರ, ಮುಖ್ತರ್ ಅವರ ಪಾರ್ಥಿವ ಶರೀರವನ್ನು ಅವರ ಮಗ ಉಮರ್ ಅನ್ಸಾರಿಗೆ ಹಸ್ತಾಂತರಿಸಲಾಗಿತ್ತು.

ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ:
ಅನ್ಸಾರಿ ಕುಟುಂಬ ಬಂದಾ ಜೈಲಿನಲ್ಲಿ ಸ್ಲೋ ಪಾಯ್ಸನ್ ನೀಡಲಾಗಿದೆ ಎಂದು ಆರೋಪಿಸಿದ ಬೆನ್ನಲ್ಲೇ, ವಿರೋಧ ಪಕ್ಷಗಳು ಅವರ ಕುಟುಂಬದ ಪರ ಧ್ವನಿ ಎತ್ತಿವೆ. ಈ ಹಿನ್ನೆಲೆಯಲ್ಲಿ ಅನ್ಸಾರಿ ಸಾವಿನ ತನಿಖೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಬಂದಾ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಭಗವಾನ್ ದಾಸ್ ಗುಪ್ತಾ ಅವರು ಹೆಚ್ಚುವರಿ ಸಿಜೆಎಂ ಗರಿಮಾ ಸಿಂಗ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ತನಿಖೆಯ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಜೈಲಿನಲ್ಲಿದ್ದ ಮುಖ್ತಾರ್ ಅನ್ಸಾರಿ ಗುರುವಾರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಉತ್ತರ ಪ್ರದೇಶದ ಮಾವ್‍ದಿಂದ ಐದು ಬಾರಿ ಗೆದ್ದು ಶಾಸಕರಾಗಿದ್ದರು. ಅವರ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳಿದ್ದು, ಅದರಲ್ಲಿ 15 ಕೊಲೆ ಆರೋಪದ ಪ್ರಕರಣಗಳಾಗಿವೆ
