
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಮೈಸೂರು ಅಥವಾ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಟಿಕೆಟ್ ಸಿಗದೇ ಇದ್ದುದರಿಂದ ಬೇಸರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು(ಮಾ.28): ವಿಧಾನಪರಿಷತ್ತಿನ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬುಧವಾರ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದರು. ಹೊರಟ್ಟಿ ಅವರು ಅದನ್ನು ಅಂಗೀಕರಿಸಿದರು. ಅವರ ಸದಸ್ಯತ್ವದ ಅವಧಿ ಬರುವ ಜೂನ್ ತಿಂಗಳವರೆಗೆ ಇತ್ತು. ಇದೇ ವೇಳೆ ತೇಜಸ್ವಿನಿ ಅವರು ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಬಂದಿದ್ದ ತೇಜಸ್ವಿನಿ ಅವರು ಈಗ ಮತ್ತೆ ಕಾಂಗ್ರೆಸ್ಗೆ ವಾಪಸಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಮೈಸೂರು ಅಥವಾ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಟಿಕೆಚ್ ಸಿಗದೇ ಇದ್ದುದರಿಂದ ಬೇಸರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರಿಗೆ ಒಳ್ಳೆಯದಾಗಲಿ:
ತೇಜಸ್ವಿನಿಗೌಡ ಅವರಿಗೆ ಬಿಜೆಪಿ ಪಕ್ಷವು ಎಲ್ಲ ಸ್ಥಾನ ಮಾನ ನೀಡಿದೆ. ಅದಕ್ಕೆ ಅವರು ಈ ರೀತಿ ಉಪಕಾರ ತೀರಿಸಿದ್ದಾರೆ. ಅವರು ರಾಜೀನಾಮೆ ನೀಡಿರುವುದು ಬಹಳ ಸಂತೋಷ. ಅವರಿಗೆ ಒಳ್ಳೆಯದಾಗಲಿ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು
