
ಮೈಸೂರು: ಲೋಕ ಸಭಾ ಚುನಾವಣೆ ಸಮಯದಲ್ಲಿ ತಂತ್ರ-ರಣತಂತ್ರ ನಡೆಯುತ್ತಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಊರಿನಲ್ಲಿ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಾಜಿ ಸಚಿವ ಕೋಟೆ ಶಿವಣ್ಣ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.
ಲೋಕ ಸಭೆಗಾಗಿ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ. ಅದರಲ್ಲೂ ಸಿಎಂ ಮಾಸ್ಟರ್ ಪ್ಲಾನ್ ವರ್ಕೌಟ್ ಆಗಿದೆ. ರೆಸಾರ್ಟ್ ನಲ್ಲಿ ಕುಳಿತು ಸಿದ್ದರಾಮಯ್ಯನವರು ಆಪರೇಷನ್ ಹಸ್ತ ನಡೆಸಿದ್ದಾರೆ. ಅದರ ಫಲವಾಗಿ ಕೋಟೆ ಶಿವಣ್ಣ ಕಾಂಗ್ರೆಸ್ನತ್ತ ಬರಲು ಮುಂದಾಗಿದ್ದಾರೆ.

ಕೋಟೆ ಶಿವಣ್ಣ ಈವತ್ತು ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕೋಟೆ ಶಿವಣ್ಣ 2020-23 ವರಗೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾಗಿದ್ದರು. ಆದರೆ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ನತ್ತ ಪಕ್ಷ ಪರ್ಯಟನೆ ಮಾಡಿದ್ದಾರೆ.

ಮುಂಬರುವ ಚುನಾವಣೆಗಾಗಿ ಸಿಎಂ ಸಿದ್ದರಾಮಯ್ಯ ಭಾರೀ ಲೆಕ್ಕಚಾರ ಹಾಕಿಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ಕಬಿನಿ ಹಿನ್ನೀರು ಬಳಿಯ ರೆಸಾರ್ಟ್ ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಅದರಲ್ಲೂ ಶತಾಯಗತಾಯ ಮೈಸೂರು, ಚಾಮರಾಜನಗರ ಲೋಕ ಅಖಾಡಗಳನ್ನ ಗೆಲ್ಲಲೇಬೇಕೆಂಬ ಹಠ ಹಿಡಿದಿದ್ದಾರೆ. ಇದಕ್ಕಾಗಿ ಹಲವರನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.

