
ಒಂದಲ್ಲ ಎರಡಲ್ಲ ಬರೋಬ್ಬರಿ 16 ವರ್ಷ. ಈ ಸಲ ‘ಕಪ್ ನಮ್ದೇ’ ಅಂತ ಪ್ರತಿ ಸಲ ಕನಸು ಕಂಡಿದ್ದ ಕೋಟಿ ಕೋಟಿ ಅಭಿಮಾನಿಗಳ ಕನಸು ಪ್ರತಿ ಸಲನೂ ಕನಸಾಗಿಯೇ ಉಳಿದಿತ್ತು. ಕೊನೆಗೂ ಆರ್‌ಸಿಬಿಯ ವನಿತೆಯರು ಕಪ್ ಗೆದ್ದು, ಆ ಬರವನ್ನು ನೀಗಿಸಿದ್ದಾರೆ.

WPL 2024 ರಲ್ಲಿ ಸ್ಮೃತಿ ಮಂದಾನ ಪಡೆ ಕಪ್ಗೆ ಮುತ್ತಿಡುತ್ತಿದ್ದಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್ ಮಲ್ಯ ಫುಲ್ ಖುಷ್ ಆಗಿದ್ದಾರೆ. ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿರುವ ವಿಜಯ್ ಮಲ್ಯ, ‘WPL ಗೆದ್ದ RCB ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು. ಮುಂದಿನ ಟೂರ್ನಿಯಲ್ಲಿ ಆರ್‌ಸಿಬಿಯ ಪುರುಷರ ತಂಡವೂ ಗೆದ್ದರೆ ಆ ಖುಷಿ ಡಬಲ್ ಆಗಲಿದೆ. ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.


ಇತ್ತ ಮಲ್ಯ ಟ್ವೀಟ್ ಮಾಡಿದ ಬೆನ್ನಲ್ಲೇ ಇಂಟರ್ನೆಟ್ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ವಂಚಿಸಿದ ಆರೋಪವನ್ನು ಮಲ್ಯ ಹೊತ್ತಿದ್ದಾರೆ. 9000 ಕೋಟಿ ರೂಪಾಯಿ ಸಾಲ ಮಾಡಿ ಅದರ ಬಡ್ಡಿಯನ್ನೂ ಪಾವತಿಸದೇ ಭಾರತ ಬಿಟ್ಟು ಓಡಿ ಹೋಗಿ ಲಂಡನ್‌ನಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿ 2007ರಲ್ಲಿ IPL ಘೋಷಿಸಿದಾಗ, ವಿಜಯ್ ಮಲ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿ ಮುನ್ನಡೆಸಿದ್ದರು. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸ್ಥಾನಕ್ಕೆ ಮಲ್ಯ ಫೆಬ್ರವರಿ 25, 2016 ರಂದು ರಾಜೀನಾಮೆ ನೀಡಿದ್ದಾರೆ.
