
ನವದೆಹಲಿ: ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗ ಎಲೆಕ್ಷನ್ ಡೇಟ್ ಅನೌನ್ಸ್ ಮಾಡಿದ್ದು, ವೋಟಿಂಗ್ ಯಾವಾಗ? ರಿಸಲ್ಟ್ ಯಾವಾಗ? ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ಬಾರಿಯಂತೆ ಈ ಸಲವೂ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಕುರಿತು ಇನ್ನೇನು ಕೆಲವೇ ಕ್ಷಣಗಳಲ್ಲಿ ಗೆಜೆಟ್ ಅಧಿಸೂಚನೆ ಹೊರಬೀಳಲಿದೆ. ಮೊದಲ ಹಂತದ ಮತದಾನ ಏಪ್ರಿಲ್ 19ನೇ ತಾರೀಕು ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಬರಲಿದೆ ಎಂದರು.

ಮೇ 23ನೇ ತಾರೀಕು ಬಹುನಿರೀಕ್ಷಿತ 18ನೇ ಲೋಕಸಭೆಯ ಭವಿಷ್ಯ ನಿರ್ಧಾರವಾಗಲಿದೆ. ಈ ಸಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆಯಾ ಅಥವಾ ರಾಹುಲ್ ಗಾಂಧಿ ನೇತೃತ್ವದ INDIA ಕೂಟ ಗೆಲ್ಲುತ್ತಾ ಎಂದು ನೋಡಬೇಕಿದೆ. ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ದೇಶದ ಭವಿಷ್ಯದ ರಾಜಕಾರಣ ನಿರ್ಧಾರವಾಗಲಿದೆ.

ಇನ್ನು, ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ಜಗತ್ತಿನ ಅತೀ ದೊಡ್ಡ ಮತದಾನಕ್ಕೆ ಭಾರತ ಸಿದ್ಧವಾಗಿದೆ. ಈ ಬಾರಿ 97 ಕೋಟಿಗೂ ಹೆಚ್ಚು ಜನ ಮತದಾನ ಮಾಡಲಿದ್ದಾರೆ. ಸುಮಾರು ಸುಮಾರು 11 ಲಕ್ಷ ಆಸುಪಾಸು ಮತಗಟ್ಟೆಗಳಲ್ಲಿ ವೋಟಿಂಗ್ ಆಗಲಿದೆ. 1.5 ಕೋಟಿ ಸಿಬ್ಬಂದಿ ಮತಗಟ್ಟೆ ನಿರ್ವಹಣೆ ಮಾಡಲಿದ್ದಾರೆ. ಈ ಬಾರಿ 49.7 ಕೋಟಿ ಪುರುಷ ಮತದಾರರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. 19 ಕೋಟಿಗೂ ಹೆಚ್ಚು ಯುವ ಮತದಾರರು ಇದ್ದು, 1.8 ಕೋಟಿ ಮತದಾರರು ಮೊದಲ ಬಾರಿಗೆ ವೋಟ್ ಮಾಡಲಿದ್ದಾರೆ. ಅದರಲ್ಲೂ 48 ಸಾವಿರ ಮಂಗಳ ಮುಖಿ ವೋಟರ್ಸ್, 82 ಲಕ್ಷ 85 ವರ್ಷಕ್ಕೂ ಹೆಚ್ಚು ಮೇಲ್ಪಟ್ಟ ಮತದಾರರು, 2.18 ಲಕ್ಷ 100 ವರ್ಷ ಪೂರೈಸಿದವರು, 89 ಲಕ್ಷ ವಿಶೇಷ ಚೇತನ ಮತದಾರರು ಇದ್ದಾರೆ ಎಂದರು.

ಪ್ರಜಾಪ್ರಭುತ್ವದ ಹಬ್ಬಕ್ಕೆ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಿ ಷರಾ ಬರೆದಿದೆ. ಈ ಮೂಲಕ ಇಂದಿನಿಂದ ಲೋಕಸಭೆ ಚುನಾವಣೆಯ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಮೊದಲ ಹಂತದ ಮತದಾನ ಏಪ್ರಿಲ್ 19ನೇ ತಾರೀಕು ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಯಾವಾಗ ಚುನಾವಣೆ..?
- ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ
- ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ
- ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ
- ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ
- ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ

ಕರ್ನಾಟಕದಲ್ಲಿ ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 26ಕ್ಕೆ ಮೊದಲ ಹಂತದಲ್ಲಿ 14 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದರೆ, ಮೇ 7ಕ್ಕೆ 2ನೇ ಹಂತದಲ್ಲಿ ಉಳಿದ 14 ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ಹಂತಗಳು | ದಿನಾಂಕ | ಲೋಕಸಭಾ ಕ್ಷೇತ್ರ |
ಮೊದಲ ಹಂತ | ಏಪ್ರಿಲ್ 19 | 102 |
2ನೇ ಹಂತ | ಏಪ್ರಿಲ್ 26 | 89 |
3ನೇ ಹಂತ | ಮೇ 7 | 94 |
4ನೇ ಹಂತ | ಮೇ 13 | 96 |
5ನೇ ಹಂತ | ಮೇ 20 | 49 |
6ನೇ ಹಂತ | ಮೇ 25 | 57 |
7ನೇ ಹಂತ | ಜೂನ್ 1 | 8 |
ಇಂದಿನಿಂದಲೇ ನೀತಿ ಸಂಹಿತೆ ಜಾರಿ: ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ನೀತಿ ಸಂಹಿತೆ ಜಾರಿಯಾಗಿದೆ. ಅದರಂತೆ ಸರ್ಕಾರ/ಸಚಿವರು ಅನುದಾನ ಅಥವಾ ಭರವಸೆಗಳನ್ನು ಪ್ರಕಟಿಸುವಂತಿಲ್ಲ. ಶಂಕುಸ್ಥಾಪನೆ, ಉದ್ಘಾಟನೆ, ಚಾಲನೆ ಕಾರ್ಯಕ್ರಮ ನೆರವೇರಿಸುವಂತಿಲ್ಲ. ಮತದಾರರ ಮೇಲೆ ಪ್ರಭಾವ ಬೀರುವಂತಹ ನೇಮಕಾತಿ ಮಾಡುವಂತಿಲ್ಲ ಹಾಗೂ ಚುನಾವಣೆ ಕೆಲಸಕ್ಕೆ ರಾಜಕಾರಣಿಗಳು ಸರ್ಕಾರಿ ವಾಹನ ಬಳಸುವಂತಿಲ್ಲ.