
2019 ರಿಂದ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾದ ಇನ್ನೂರಕ್ಕೂ ಹೆಚ್ಚು ಅರ್ಜಿಗಳು ಸಿಎಎ ಕಾನೂನಿನ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿವೆ.
ದೆಹಲಿ ಮಾರ್ಚ್ 15: ಪೌರತ್ವ ತಿದ್ದುಪಡಿ ಕಾಯಿದೆ (CAA), 2019 ರ ತಡೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಮಾರ್ಚ್ 19 ರಂದು ಸುಪ್ರೀಂಕೋರ್ಟ್ (Supreme Court) ವಿಚಾರಣೆ ನಡೆಸಲಿದೆ. ಈ ವಿಷಯವನ್ನು ಹಿರಿಯ ವಕೀಲ ಕಪಿಲ್ ಸಿಬಲ್ (Kapil Sibal) ಅವರು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಅವರ ಮುಂದೆ ಪ್ರಸ್ತಾಪಿಸಿದ್ದು, ಅರ್ಜಿಗಳನ್ನು ಮುಂದಿನ ವಾರ ವಿಚಾರಣೆ ನಡೆಸಲಾಗುವುದು ಎಂದು ಸಿಜೆಐ ಹೇಳಿದ್ದಾರೆ.

2019 ರಿಂದ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಲಾದ ಇನ್ನೂರಕ್ಕೂ ಹೆಚ್ಚು ಅರ್ಜಿಗಳು ಸಿಎಎ ಕಾನೂನಿನ ವಿವಿಧ ನಿಬಂಧನೆಗಳನ್ನು ಪ್ರಶ್ನಿಸಿವೆ. ಕಾಯ್ದೆಯ ಅಧಿಸೂಚನೆಯನ್ನು ವಿರೋಧ ಪಕ್ಷ ನಾಯಕರು ಟೀಕಿಸಿದ್ದಾರೆ. ಈ ಅಧಿಸೂಚಿತ ನಿಯಮಗಳು “ಅಸಂವಿಧಾನಿಕ”, “ತಾರತಮ್ಯ”ದಿಂದ ಕೂಡಿದ್ದು ಸಂವಿಧಾನದಲ್ಲಿ ಪ್ರತಿಪಾದಿಸಲಾದ “ಪೌರತ್ವದ ಜಾತ್ಯತೀತ ತತ್ವ” ದ ಉಲ್ಲಂಘನೆಯಾಗಿದೆ ಎಂದು ವಿಪಕ್ಷ ಪ್ರತಿಪಾದಿಸಿದೆ.

ಮುಸ್ಲಿಮರನ್ನು ಅದರ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಮತ್ತು ಪೌರತ್ವವನ್ನು ಧಾರ್ಮಿಕ ಗುರುತಿಗೆ ಜೋಡಿಸುವ ಮೂಲಕ, ಕಾನೂನು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ವಿಮರ್ಶಕರು ವಾದಿಸಿದ್ದಾರೆ. ಆದಾಗ್ಯೂ, ಸಿಎಎ ಪೌರತ್ವವನ್ನು ನೀಡುವುದಾಗಿದೆ. ದೇಶದ ಯಾವುದೇ ನಾಗರಿಕರು ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಕೇಂದ್ರವು ಸಮರ್ಥಿಸಿಕೊಂಡಿದೆ.
ಗುರುವಾರ ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಅನ್ನು ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ನೇತೃತ್ವದ ಸರ್ಕಾರವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸಿಎಎ ಅನ್ನು ಎಂದಿಗೂ ಹಿಂತೆಗೆದುಕೊಳ್ಳುವುದಿಲ್ಲ” ಎಂದು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದಾರೆ. “ವಿರೋಧ ಪಕ್ಷಗಳಿಗೆ ಬೇರೆ ಕೆಲಸವಿಲ್ಲ. ಹೇಳೋದು ಒಂದು ಮಾಡುವುದು ಇನ್ನೊಂದು ಮಾಡುವ ಇತಿಹಾಸ ಅವರದು. ಆದರೆ, ಪ್ರಧಾನಿ ಮೋದಿ ಹಾಗೂ ಬಿಜೆಪಿ ಇತಿಹಾಸವೇ ಬೇರೆ. ಬಿಜೆಪಿ ಅಥವಾ ಪ್ರಧಾನಿ ಮೋದಿ ಹೇಳೋದು ಕಲ್ಲಿನಲ್ಲಿ ಕೆತ್ತಿದಂತೆ. ಪ್ರತಿ ಗ್ಯಾರಂಟಿಯನ್ನು ಮೋದಿ ಈಡೇರಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
