
ಚಂಡೀಗಢ: ಲೋಕಸಭಾ ಚುನಾವಣೆ (Lok Sabha Elections 2024) ಹೊತ್ತಲ್ಲೇ ಹರಿಯಾಣದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದಿದೆ. ಹರಿಯಾಣ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ (M.L.Khattar) ಮತ್ತು ಸಚಿವ ಸಂಪುಟ ರಾಜೀನಾಮೆ ಸಲ್ಲಿಸಿದೆ.
ಮಂಗಳವಾರ ಬೆಳಗ್ಗೆ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿಯಾಗಿ ಖಟ್ಟರ್ ರಾಜೀನಾಮೆ ಸಲ್ಲಿಸಿದ್ದಾರೆ. ಹರಿಯಾಣದ (Haryana) ನೂತನ ಮುಖ್ಯಮಂತ್ರಿ ಇಂದೇ (ಮಂಗಳವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.


90 ಸದಸ್ಯ ಬಲದ ವಿಧಾನಸಭೆಯಲ್ಲಿ 40 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿ ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ ಎಂದು ಮೂಲಗಳು ತಿಳಿಸಿವೆ. ದುಶ್ಯಂತ್ ಚೌತಾಲಾ ಅವರ ಜೆಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಇಲ್ಲಿಯವರೆಗೆ ಬಿಜೆಪಿ ಆಡಳಿತ ನಡೆಸುತ್ತಿತ್ತು.
ಹರಿಯಾಣದಲ್ಲಿ ಬಿಜೆಪಿ-ಜನನಾಯಕ ಜನತಾ ಪಕ್ಷ (ಜೆಜೆಪಿ)ಯ ಆಡಳಿತ ಸಮ್ಮಿಶ್ರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಎಲ್ಲಾ ಸಚಿವರು ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ವಿಫಲವಾದ ನಂತರ ಬಿಜೆಪಿ ಮತ್ತು ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ನಡುವಿನ ಸಂಬಂಧ ಹದಗೆಟ್ಟಿದೆ. 2019 ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲಾ 10 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು.
ಮೈತ್ರಿ ಮುರಿದು ಬಿದ್ದಿದೆ. ಆದರೆ ಎಂ.ಎಲ್.ಖಟ್ಟರ್ ಅವರನ್ನು ಬೆಂಬಲಿಸುವ ಕೆಲವು ಸ್ವತಂತ್ರ ಶಾಸಕರು ಸರ್ಕಾರದ ಅಸ್ತಿತ್ವವನ್ನು ಖಚಿತಪಡಿಸುತ್ತಾರೆ ಎಂದು ಸ್ವತಂತ್ರ ಶಾಸಕ ನಯನ್ ಪಾಲ್ ರಾವತ್ ಮಂಗಳವಾರ ಹೇಳಿದ್ದಾರೆ.

ಬಿಜೆಪಿ ಮತ್ತು ಜೆಜೆಪಿ (ಜನನಾಯಕ ಜನತಾ ಪಕ್ಷ) ಎರಡೂ ಪಕ್ಷಗಳ ವರಿಷ್ಠರು ಆಯಾ ಶಾಸಕರ ಪ್ರತ್ಯೇಕ ಸಭೆಗಳನ್ನು ಕರೆದಿದ್ದಾರೆ. ಅದಕ್ಕೂ ಮುನ್ನ ಖಟ್ಟರ್ ಅವರು ತಮ್ಮ ನಿವಾಸದಲ್ಲಿ ಬಿಜೆಪಿಯ ಎಲ್ಲ ಸಚಿವರ ಸಭೆ ನಡೆಸಲಿದ್ದಾರೆ.