
ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಟೀಕಾಕಾರರಾಗಿರುವ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಮೋದಿ ವಿರುದ್ಧ ಮತ್ತೆ ವಾಗ್ಧಾಳಿಯನ್ನು ನಡೆಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೋತರೆ ಮಾತ್ರ ಹಿಂದೂ ರಾಷ್ಟ್ರವಾಗಲು ಸಾಧ್ಯ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದರೆ, ವಾರಣಾಸಿಯಲ್ಲಿ ಮೋದಿ ಸೋತರೆ ಮಾತ್ರ ಹಿಂದೂ ರಾಷ್ಟ್ರವಾಗುವುದು ಎಂದು ಹೇಳಿದ್ದು, ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಸೋಲಿಸುವಂತೆ ಪರೋಕ್ಷವಾಗಿ ಜನರಿಗೆ ಕರೆ ನೀಡಿದ್ದಾರೆ.

ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಬಿಜೆಪಿ ಟಿಕೆಟ್ ನೀಡದೆ, ಆರೆಸ್ಸೆಸ್‌ನ್ನು ‘ಹಿಂದೂ ಭಯೋತ್ಪಾದನೆ’ ಎಂದು ಆರೋಪಿಸಿದ ಕೃಪಾ ಶಂಕರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ ಎಂದು ಎಕ್ಸ್ ಬಳಕೆದಾರರೊಬ್ಬರು ಮಾಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ, ಮೋದಿಯನ್ನು ಸೋಲಿಸಿದರೆ ಮಾತ್ರ ಹಿಂದೂ ರಾಷ್ಟ್ರ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

ಇತ್ತೀಚೆಗೆ ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು, ಪಟ್ಟಿಯಲ್ಲಿ ಬಿಜೆಪಿ ಪೈರ್ ಬ್ರಾಂಡ್ ಎಂದು ಕರೆಯಲ್ಪಟ್ಟಿದ್ದ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಭೋಪಾಲ್‌ನ ಹಾಲಿ ಸಂಸದರಾಗಿರುವ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಟಿಕೆಟ್ ನೀಡದಿರುವುದು ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ಟಿಕೆಟ್ ಕೈತಪ್ಪಿದ ಬಗ್ಗೆ ಸಂಸದೆ ಪ್ರಜ್ಞಾ ಠಾಕೂರ್ ಅವರು ಪ್ರತಿಕ್ರಿಯಿಸಿ, ಪ್ರಧಾನಿ ಮೋದಿ ನನ್ನನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದರು. ನಾನು ಈ ಹಿಂದೆಯೂ ಟಿಕೆಟ್ ಬಯಸಿರಲಿಲ್ಲ ಹಾಗೂ ಮುಂದೆಯೂ ಟಿಕೆಟ್ ಬಯಸುವುದಿಲ್ಲ. ನನ್ನ ಈ ಹಿಂದಿನ ಕೆಲವು ಹೇಳಿಕೆಗಳಲ್ಲಿನ ಪದಗಳು ಪ್ರಧಾನಿ ನರೇಂದ್ರ ಮೋದಿಗೆ ಇಷ್ಟವಾಗಿರಲಿಕ್ಕಿಲ್ಲ. ನಾನು ಈ ಹಿಂದೆಯೆ ನನ್ನ ಹೇಳಿಕೆಗಳಿಗೆ ಕ್ಷಮೆ ಯಾಚಿಸಿದ್ದೇನೆ ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.