
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸೇರಿದ ನಿರ್ಮಾಣ ಹಂತದ ಭಂಡಾರ ಮನೆಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಜೆಸಿಬಿ ಮೂಲಕ ಧ್ವಂಸಗೊಳಿಸಿದ ಘಟನೆ ನಡೆದಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡ ಹಿನ್ನೆಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಎರಡು ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ.

ಮಂಗಳೂರು, ಮಾ.3: ಪಿಲಿಚಾಮುಂಡಿ ದೈವಸ್ಥಾನಕ್ಕೆ ಸೇರಿದ ನಿರ್ಮಾಣ ಹಂತದ ಭಂಡಾರ ಮನೆಯನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಜೆಸಿಬಿ ಮೂಲಕ ಧ್ವಂಸಗೊಳಿಸಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಉಳ್ಳಾಲ (Ullala) ತಾಲೂಕಿನ ಕೊಂಡಾಣದಲ್ಲಿ (Kondana) ನಡೆದಿದೆ. ಕೊಂಡಾಣ ಕ್ಷೇತ್ರದ (Pilichamundi), , ವೈದ್ಯನಾಥ ದೇವಸ್ಥಾನಕ್ಕೆ ಸೇರಿದ ನೂತನವಾಗಿ ನಿರ್ಮಾಣ ಮಾಡಲಾಗುತ್ತಿದ್ದ ಭಂಡಾರ ಮನೆಯನ್ನು ಧ್ವಂಸಗೊಳಿಸಲಾಗಿದೆ. ದೈವಸ್ಥಾನದ ಆಡಳಿತ ಮಂಡಳಿ ವಿಚಾರವಾಗಿ ಎರಡು ಬಣಗಳ ಮಧ್ಯೆ ವಿವಾದ ಉಂಟಾಗಿ ಭಂಡಾರದ ಮನೆ ಧ್ವಂಸ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್, ತಹಶೀಲ್ದಾರ್ ಪುಟ್ಟರಾಜು, ಎಸಿಪಿ ಧನ್ಯಾ ನಾಯಕ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆನಂದ್ ಅವರು ಠಾಣೆಗೆ ದೂರು ನೀಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಭಕ್ತರ ಜಮಾವಣೆ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರ ಜೊತೆಗೆ ಎರಡು ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ
ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸೇರುವ ಕೊಂಡಾಣ ದೇವಸ್ಥಾನದ ಭಂಡಾರ ಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಸೇರಿದಂತೆ ಹಲವರು ಯತ್ನಿಸಿದ್ದರು. ಆದರೆ ಇದಕ್ಕೆ ಖಾಸಗಿ ಭಂಡಾರ ಮನೆಯವರು ಸಮ್ಮತಿ ನೀಡಿರಲಿಲ್ಲ. ಅಲ್ಲದೆ, ಸಮಿತಿಯು ದೈವಗಳಿಗೆ ಬೇರೆ ಭಂಡಾರ ಮನೆ ನಿರ್ಮಾಣಕ್ಕೆ ಮುಂದಾಗಿತ್ತು.

ದೇಗುಲದ ಪಕ್ಕದ ಜಾಗದಲ್ಲಿ ಜನವರಿ 8 ರಂದು ಕೃಷ್ಣ ಶೆಟ್ಟಿ ನೇತ್ವತ್ವದಲ್ಲಿ ಭಂಡಾರ ಮನೆಯ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ ಕಾಮಗಾರಿ ಪೂರ್ಣಗೊಂಡಿತ್ತು. ಈ ಮಧ್ಯೆ ಸಮಿತಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಅವರು ಎರಡು ದಿನದ ಹಿಂದಷ್ಟೇ ಅಧಿಕಾರ ಹಸ್ತಾಂತರಿಸಿದ್ದರು. ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಿದ್ದಂತೆ ಭಂಡಾರ ಮನೆ ಧ್ವಂಸಗೊಂಡಿದೆ.

ಜೆಸಿಬಿಯಿಂದ ಏಕಾಏಕಿ ನಿರ್ಮಾಣ ಹಂತದ ಭಂಡಾರ ಮನೆ ನೆಲಸಮಗೊಳಿಸಲಾಗಿದ್ದು, ದೈವದ ಕೋಟ್ಯಂತರ ರೂಪಾಯಿ ಒಡವೆಗಳ ಅಧಿಪತ್ಯಕ್ಕಾಗಿ ಸಂಘರ್ಷ ಇದಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಮುತ್ತಣ್ಣ ಶೆಟ್ಟಿ ಕುಟುಂಬಸ್ಥರ ಸುಪರ್ದಿಯಲ್ಲೇ ಒಡವೆಗಳಿದ್ದು, ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.