
ಹೊಸದಿಲ್ಲಿ: ದೇವರನಾಡು ಕೇರಳದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ಭಾರೀ ಕಸರತ್ತು ನಡೆಸುತ್ತಿರುವ ಬಿಜೆಪಿ ಮೊದಲ ಪಟ್ಟಿಯಲ್ಲಿ 20 ಕ್ಷೇತ್ರಗಳ ಪೈಕಿ ೧೨ ಅಭ್ಯರ್ಥಿಗಳನ್ನು ಘೋಷಿಸಿ ರಣತಂತ್ರ ಹಣೆದಿದೆ.
ನಿರೀಕ್ಷೆಯಂತೆ ತ್ರಿಶೂರ್ನಲ್ಲಿ ಸ್ಟಾರ್ ಅಭ್ಯರ್ಥಿ ಸುರೇಶ್ ಗೋಪಿ ಅವರಿಗೆ ಟಿಕೆಟ್ ನೀಡಲಾಗಿದೆ. ತಿರುವನಂತದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ವಿ ಮುರಳೀಧರನ್ ಅವರು ಅಟ್ಟಿಂಗಲ್ ನಲ್ಲಿ, ಅನಿಲ್ ಆಂಟೋನಿ ಪಥನಂತಿಟ್ಟದಿಂದ ಚುನಾವಣೆ ಎದುರಿಸಲಿದ್ದಾರೆ.ಕಾಸರಗೋಡು ಕ್ಷೇತ್ರದಿಂದ ಎಂ.ಎಲ್.ಅಶ್ವಿನಿ, ಕಣ್ಣೂರಿನಿಂದ ಸಿ. ರಘುನಾಥ್, ಮಲಪ್ಪುರಂನಿಂದ ಡಾ. ಅಬ್ದುಲ್ ಸಲಾಂ, ಪೊನ್ನಾನಿಯಿಂದ ನಿವೇದಿತಾ ಸುಬ್ರಹ್ಮಣ್ಯನ್, ಪಾಲಕ್ಕಾಡ್ ನಿಂದ ಸಿ. ಕೃಷ್ಣಕುಮಾರ್, ಆಲಪ್ಪುಳದಿಂದ ಶೋಭಾ ಸುರೇಂದ್ರನ್, ವಡಕರದಿಂದ ಪ್ರಫುಲ್ ಕೃಷ್ಣ ಕೋಝಿಕ್ಕೋಡ್ ನಿಂದ ಎಂ.ಟಿ. ರಮೇಶ್ ಕಣಕ್ಕಿಳಿಯಲಿದ್ದಾರೆ.

ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಮತ್ತು ವಿ. ಮುರಳೀಧರನ್ ಅವರು ಕಣಕ್ಕಿಳಿದಿರುವ ತಿರುವನಂತಪುರ ಮತ್ತು ಅಟ್ಟಿಂಗಲ್ ನಲ್ಲಿ, ನಟ ಸುರೇಶ್ ಗೋಪಿ ಕಣ್ಣಕ್ಕಿಳಿದಿರುವ ತ್ರಿಶೂರ್ನಲ್ಲಿ ಬಿಜೆಪಿಗೆ ಕಾರ್ಯಕರ್ತರ ಬಲವಿದ್ದು, ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆಗಳಿವೆ. ಬಿಜೆಪಿ ಯಾವ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎನ್ನುವ ಕುತೂಹಲ ಮೂಡಿಸಿದೆ.ತಿರುವನಂತಪುರಂ ಕ್ಷೇತ್ರವನ್ನು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಪ್ರತಿನಿಧಿಸುತ್ತಿದ್ದಾರೆ ಎನ್ನುವುದು ವಿಶೇಷ.ಟಿಕೆಟ್ ಹಂಚಿಕೆ ವಿಚಾರದಲ್ಲೂ ಕೇಸರಿ ಪಕ್ಷ ಗಮನ ಸೆಳೆದಿದ್ದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ತಲಾ ಒಬ್ಬರಿಗೆ ಟಿಕೆಟ್ ನೀಡಿ ಧರ್ಮ ಸಮನ್ವಯತೆ ತೋರಿದೆ. ಇದು ಯಾವ ಮಟ್ಟದಲ್ಲಿ ಪಕ್ಷಕ್ಕೆ ಲಾಭ ತರಲಿದೆ ಎನ್ನುವ ನಿರೀಕ್ಷೆಯೂ ಮೂಡಿದೆ.
