
ರಾಜ್ಯಸಭಾ ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆಲುವಿನ ಬಳಿಕ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸುವ ವೇಳೆ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಮಾದ್ಯಮಗಳು ಮತ್ತು ಬಿಜೆಪಿ ನಾಯಕರು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಇದರ ಬೆನ್ನಲ್ಲಿ ಬಿಜೆಪಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಜೊತೆಗೆ ಪ್ರತಿಭಟನೆಗೆ ಕರೆ ಕೊಟ್ಟಿದೆ. ತುಮಕೂರಿನಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಮುಂದಾದ ಬಿಜೆಪಿ ಕಾರ್ಯಕರ್ತರು ರಂಪಾಟವನ್ನು ಮೆರೆದಿದ್ದು ಡಿವೈಎಸ್ಪಿಯ ಮೂಗಿಗೆ ಗಾಯವಾಗಿದೆ.

ತುಮಕೂರಿನ ಭದ್ರಮ್ಮ ವೃತ್ತದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಅಟ್ಟಹಾಸವನ್ನು ಮೆರೆದಿದ್ದು, ಡಿವೈಎಸ್ಪಿ ಚಂದ್ರಶೇಖರ್ ಮೂಗಿಗೆ ಗಾಯವಾಗಿದೆ.

ಈ ಘಟನೆಯ ಬಗ್ಗೆ ಖುದ್ದು ಡಿವೈಎಸ್ಪಿ ಚಂದ್ರಶೇಖರ್ ಅವರ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಚಂದ್ರಶೇಖರ್ ಅವರ ಮೂಗಿನಲ್ಲಿ ಸ್ವಲ್ಪ ರಕ್ತ ಸೋರಿಕೆಯಾಗುತ್ತಿರವುದು ಕಂಡು ಬಂದಿದೆ. ವಿಡಿಯೋದಲ್ಲಿ ಮ್ಯಾನ್ ಹ್ಯಾಂಡಲಿಂಗ್ ಮಾಡ್ತೀರಾ? ಎಷ್ಟು ಧೈರ್ಯ ನಿಮಗೆ ಪೊಲೀಸರ ಮೇಲೆ ಕೈ ಹಾಕಲಿಕ್ಕೆ? ಯಾರ್ಯಾರಿದ್ದಾರೆ ಎಲ್ಲರ ವಿಡಿಯೋ ಮಾಡಿ ಎಫ್ಐಆರ್ ಹಾಕಿ ಎಂದು ಡಿವೈಎಸ್ಪಿ ಚಂದ್ರಶೇಖರ್ ಅವರು ಸ್ಥಳದಲ್ಲೇ ಬಿಜೆಪಿ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಸೆರೆಯಾಗಿದೆ.

ನಾಸೀರ್ ಹುಸೇನ್ ಗೆಲುವಿನ ಬಳಿಕ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸುವ ವೇಳೆ ಪಾಕಿಸ್ತಾನ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂಬುವುದು ಬಿಜೆಪಿಗರ ಆರೋಪವಾಗಿದೆ. ಈ ಬಗ್ಗೆ ಎಫ್ಎಸ್ಎಲ್ ತನಿಖೆಗೆ ಈಗಾಗಲೇ ವಿಡಿಯೋವನ್ನು ರವಾನಿಸಿರುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ಆದರೆ ಈ ಬಗ್ಗೆ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಚರ್ಚೆಯನ್ನು ಸೃಷ್ಟಿಸಿದೆ.
