
ಉಳ್ಳಾಲ, ಫೆ.18: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಹರೇಕಳದಲ್ಲಿ ಅನುಮತಿ ಪಡೆಯದೇ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಕೆ ಹಿನ್ನೆಲೆ ಕಟೌಟ್ ತೆರವುಗೊಳಿಸುವಂತೆ ಡಿವೈಎಫ್ಐ ಸಂಘಟನೆಗೆ ಕೊಣಾಜೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಫೆ.16 ರಂದು ಡಿವೈಎಫ್ಐ ಆರು ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಿತ್ತು. ಅನುಮತಿ ಪಡೆಯದೇ ಅಳವಡಿಸಿರುವುದರಿಂದ ಕೂಡಲೇ ಕಟೌಟ್ ತೆರವು ಮಾಡುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ರಾಜ್ಯದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಹಾಕಿರುವ ಧಾರ್ಮಿಕ ಗುರುತುಗಳನ್ನು ತೆರವುಗೊಳಿಸಲಾಗುತ್ತದೆ. ಇತ್ತೀಚೆಗೆ ಮಂಡ್ಯದಲ್ಲಿ ಕೇಸರಿ ಧ್ವಜಗಳನ್ನು ತೆರವುಗೊಳಿಸಲಾಗಿತ್ತು. ಮಂಡ್ಯದಲ್ಲಿ ಹನುಮ ಧ್ವಜ ತೆರವು ವಿಚಾರ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಬಳಿಕ ಇತರೆ ಕಡೆಗಳಲ್ಲಿ ಇರುವ ಕೇಸರಿ ಬಾವುಗಳನ್ನು ಕೂಡ ತೆರವುಗೊಳಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ, ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಅನುಮತಿ ಪಡೆಯದೆ ಹರೇಕಳದಲ್ಲಿ ಡಿವೈಎಫ್ಐ ಅಳವಡಿಸಿದ್ದ ಆರು ಅಡಿ ಎತ್ತರದ ಟಿಪ್ಪು ಕಟೌಟ್ ತೆರವಿಗೆ ಪೊಲೀಸರು ಮುಂದಾಗಿದ್ದಾರೆ.
