
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಜೆಟ್ ಮಂಡನೆ ಮಾಡಿದ್ದು, ಗೃಹ ಇಲಾಖೆಗೆ ಈ ಬಾರಿ ಒಟ್ಟು 19,777 ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ. ಈ ಪೈಕಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗದಲ್ಲಿ ಹೈ ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ ಮಾಡಲು ಅನುದಾನ ಮೀಸಲರಿಸಲಾಗಿದೆ.

ಬೆಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ದಾಖಲೆಯ 15ನೇ ಬಜೆಟ್ ಮಂಡನೆ ಮಾಡಿದ್ದು, ಗೃಹ ಇಲಾಖೆಗೆ ಈ ಬಾರಿ ಒಟ್ಟು 19,777 ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ. ಈ ಪೈಕಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗದಲ್ಲಿ (Shivamogga) ಹೈ ಸೆಕ್ಯೂರಿಟಿ ಕಾರಾಗೃಹ (High security prison) ನಿರ್ಮಾಣ ಮಾಡಲು ಅನುದಾನ ಮೀಸಲರಿಸಲಾಗಿದೆ.

ಆಡಳಿತ ವ್ಯವಸ್ಥೆ ಬಲಪಡಿಸಲು ತಂತ್ರಜ್ಞಾನ ಬಳಕೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ ಸಿದ್ದರಾಮಯ್ಯ, ಕನ್ನಡ ಭಾಷಾಂತರಕ್ಕೆ ಕನ್ನಡ ಕಸ್ತೂರಿ ಎಂಬ ನೂತನ ತಂತ್ರಾಂಶ ಅಭಿವೃದ್ಧಿ ಮಾಡಲಾಗುವುದು, ಕೃತಕ ಬುದ್ಧಿಮತ್ತೆ, ಮಿಷನ್ ಲರ್ನಿಂಗ್ ತಂತ್ರಜ್ಞಾನ ಬಳಕೆ ಮಾಡಲಾಗುವುದು ಎಂದರು.

ನೂತನ ಪೊಲೀಸ್ ಠಾಣಾ ಕಟ್ಟಡಗಳಿಗೆ 30 ಕೋಟಿ ರೂಪಾಯಿ ಅನುದಾನ ಮೀಸಲಿರಿಸಲಾಗುವುದು, ವಿಧಿ ವಿಜ್ಞಾನ ಪ್ರಯೋಗಾಲಯಗಳ ಮೊಬೈಲ್ ಫೊರೆನ್ಸಿಕ್, ಆಡಿಯೋ ಮತ್ತು ವಿಡಿಯೋ ವಿಭಾಗ ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. 10 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ಉಪಕರಣ, ತಂತ್ರಾಂಶ ಪೂರೈಕೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದರು.
ಎಲ್ಲಾ ಕಾರಾಗೃಹಗಳ ಸುಗಮ ಆಡಳಿತ ಹಾಗೂ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು. 5 ಕೋಟಿ ರೂಪಾಯಿ ವೆಚ್ಚದಲ್ಲಿ ಎಐ ತಂತ್ರಾಂಶ, ಬ್ಯಾಗೇಜ್ ಸ್ಕ್ಯಾನರ್ ಮುಂತಾದ ಆಧುನಿಕ ಉಪಕರಣ ಖರೀದಿಗೆ ಸರ್ಕಾರ ಕ್ರಮ ಕೈಗೊಳ್ಳಲಾಗುವುದು. ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
