
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಗೆ ಮೆರವಣಿಗೆ ಹೊರಟಿರುವ ರೈತರನ್ನು ತಡೆಯಲು ದೆಹಲಿ ಪೊಲೀಸರು ಈ ಬಾರಿ ಸಾನಿಕ್ ಅಸ್ತ್ರದ ಮೊರೆ ಹೋಗಿದ್ದಾರೆ. ಇದು ಏಕಮುಖವಾಗಿ ತೀವ್ರತರವಾದ ಶಬ್ದವನ್ನು ಹೊರಡಿಸುವ ಮೂಲಕ ಜನರು ಆ ದಿಕ್ಕಿನತ್ತ ಪ್ರಯಾಣಿಸುವುದನ್ನು ತಪ್ಪಿಸಲಿದೆ. ಈ ಶಬ್ದ ಆಲಿಸಿದವರು ಕಿವುಡಾಗುವ ಸಾಧ್ಯತೆಯೂ ಇರುತ್ತದೆ.

ಅಮೆರಿಕದಿಂದ ಆಮದು ಮಾಡಿಕೊಂಡಿರುವ ಎಲ್‌ಆರ್‌ಎಡಿ (ದೂರ ಪ್ರಯಾಣಿಸಬಲ್ಲ ತೀವ್ರ ಶಬ್ದ ಹೊರಡಿಸಬಲ್ಲ ಸಾಧನ) ಸಾಧನಗಳನ್ನು ಅಳವಡಿಸಿದೆ. ಇವುಗಳನ್ನು ಗುಂಪು ಚದುರಿಸಬಲ್ಲ ಫಿರಂಗಿ ಎಂದೂ ಕರೆಯಲಾಗುತ್ತದೆ. ಈ ಸ್ಪೀಕರ್‌ಗಳು ಏಕಮುಖವಾಗಿ ತೀವ್ರವಾದ ಶಬ್ದದ ಅಲೆಗಳನ್ನು ಹೊರಡಿಸುತ್ತವೆ. ಇದನ್ನು ಕೇಳಿಸಿಕೊಳ್ಳುವುದು ಮನುಷ್ಯರಿಗೆ ಅಸಹನೀಯವಾಗುವುದಲ್ಲದೇ, ಕಿವಿಗಳು ಕಿವುಡಾಗುವ ಸಾಧ್ಯತೆಗಳು ಇವೆ. 2013ರಲ್ಲಿ ದೆಹಲಿ ಪೊಲೀಸರು ಈ ಸಾಧನವನ್ನು ಅಮೆರಿಕದಿಂದ ಆಮದು ಮಾಡಿಕೊಂಡಿದ್ದರು, ಇವುಗಳ ಬೆಲೆ 30 ಲಕ್ಷ ರು.ನಷ್ಟಿದೆ.

ಸಾನಿಕ್ ಅಸ್ತ್ರವಷ್ಟೇ ಅಲ್ಲದೇ, ಗುಂಪು ಚದುರಿಸುವುದಕ್ಕಾಗಿ ಪೊಲೀಸರು ಗುಂಡು ಹಾರಿಸುವುದನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ರೈತರನ್ನು ತಡೆಯಲು ಈಗಾಗಲೇ ಬ್ಯಾರಿಕೇಡ್, ಭಾರಿ ಗಾತ್ರದ ಸಿಮೆಂಟ್ ಗೋಡೆ, ಮುಳ್ಳುತಂತಿ, ಮೊಳೆಗಳನ್ನು ಪೊಲೀಸರು ಗಡಿಗಳಲ್ಲಿ ಅಳವಡಿಸಿದ್ದಾರೆ.

ಡ್ರೋನ್ ದಾಳಿ ತಡೆಯಲು ರೈತರಿಂದ ಗಾಳಿಪಟ ಹಾರಾಟ
ಶಂಭು ಗಡಿ (ಹರ್ಯಾಣ): ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಡ್ರೋನ್ ಮೂಲಕ ಅಶ್ರುವಾಯು ಸಿಡಿಸಿ ರೈತರನ್ನು ಚದುರಿಸುತ್ತಿದ್ದು, ಇತ್ತ ಪ್ರತಿಭಟನಾನಿರತ ರೈತರು ಪಂಜಾಬ್-ಹರ್ಯಾಣ ಗಡಿಯಲ್ಲಿ ಡ್ರೋನ್ ವಿಫಲಗೊಳಿಸಲು ಗಾಳಿಪಟ ಹಾರಿಸುತ್ತಿದ್ದಾರೆ. ದಪ್ಪ ದಾರದ ಗಾಳಿಪಟ ಹಾರಾಟ ನಡೆಸಿದರೆ ಅವುಗಳ ದಾರ ಡ್ರೋನ್ ರೆಕ್ಕೆಗೆ ಸಿಕ್ಕಿ ನಂತರ ಡ್ರೋನ್ ಕ್ರಾಷ್ ಆಗುತ್ತದೆ ಎಂಬ ಉದ್ದೇಶದಿಂದ ರೈತರು ಗಾಳಿಪಟ ಹಾರಿಸುತ್ತಿದ್ದಾರೆ. ಇದರ ಜೊತೆಗೆ ಅಶ್ರುವಾಯು ದಾಳಿಗೆ ಯಾವುದೇ ಹಾನಿಯಾಗದಂತೆ ತಡೆಯಲು ನೀರಿನ ಬಾಟಲಿಗಳು ಹಾಗೂ ಒದ್ದೆ ಬಟ್ಟೆಗಳನ್ನು ರೈತರು ಧರಿಸುತ್ತಿದ್ದಾರೆ. ಇದಲ್ಲದೆ ಹೊಗೆ ನಿರೋಧಕ ಮಾಸ್ಕ್ ಧರಿಸಿ ಪ್ರತಿಭಟನೆಯಲ್ಲಿ ರೈತರು ಪಾಲ್ಗೊಳ್ಳುತ್ತಿದ್ದಾರೆ.