
ಕರ್ನಾಟಕದ ನಾಲ್ವರು ಸೇರಿದಂತೆ ಒಂಬತ್ತು ಸಂಸದರು ಕಳೆದ 5 ವರ್ಷಗಳಲ್ಲಿ ಲೋಕಸಭೆಯಲ್ಲಿ ಒಂದೂ ಪದವೂ ಮಾತನಾಡಿಲ್ಲ. ಕರ್ನಾಟಕದಲ್ಲಿ ನಾಲಿಗೆ ಹರಿಯಬಿಡುವ ಸಂಸದರು ಲೋಕಸಭೆಯಲ್ಲಿ ಗಪ್‌ಚುಪ್ ಕುಳಿತು 5 ವರ್ಷ ಬೆಂಚು ಬಿಸಿ ಮಾಡಿದ್ದಾರೆ
ನವದೆಹಲಿ (ಫೆ.13): ಕರ್ನಾಟಕದ ನಾಲ್ವರು ಸೇರಿದಂತೆ ಒಂಬತ್ತು ಸಂಸದರು ಕಳೆದ 5 ವರ್ಷಗಳಲ್ಲಿ ಲೋಕಸಭೆಯಲ್ಲಿ ಒಂದೂ ಪದವೂ ಮಾತನಾಡಿಲ್ಲ. ಕರ್ನಾಟಕದಲ್ಲಿ ನಾಲಿಗೆ ಹರಿಯಬಿಡುವ ಸಂಸದರು ಲೋಕಸಭೆಯಲ್ಲಿ ಗಪ್‌ಚುಪ್ ಕುಳಿತು 5 ವರ್ಷ ಬೆಂಚು ಬಿಸಿ ಮಾಡಿದ್ದಾರೆ ಹೊರತು ತಮ್ಮನ್ನು ರಾಜ್ಯದಿಂದ ಆರಿಸಿದ ಜನರ ಬಗ್ಗೆ ಕಿಂಚಿತ್ತೂ ಯೋಚನೆ ಮಾಡಿಲ್ಲ.

ರಾಜ್ಯದ ಬಿಎನ್ ಬಚ್ಚೇಗೌಡ (ಚಿಕ್ಕಬಳ್ಳಾಪುರ ಕ್ಷೇತ್ರ), ಅನಂತ್ ಕುಮಾರ್ ಹೆಗಡೆ (ಉತ್ತರ ಕನ್ನಡ ಕ್ಷೇತ್ರ), ವಿ ಶ್ರೀನಿವಾಸ್ ಪ್ರಸಾದ್ (ಚಾಮರಾಜನಗರ ಕ್ಷೇತ್ರ) ಮತ್ತು ರಮೇಶ್ ಜಿಗಜಿಣಗಿ (ಬಿಜಾಪುರ ಕ್ಷೇತ್ರ) ಸೇರಿದಂತೆ ಬಾಲಿವುಡ್ ನಟ- ಶತ್ರುಘ್ನನ್ ಸಿನ್ಹಾ 9(ಪ.ಬಂಗಾಳ -ಅಸನ್ಸೋಲ್ ಕ್ಷೇತ್ರ), ಸನ್ನಿ ಡಿಯೋಲ್ (ಬಿಜೆಪಿ-ಗುರುದಾಸಪುರ ಕ್ಷೇತ್ರ- ಪಂಜಾಬ್) ಮತ್ತು ಅತುಲ್ ರೈ (ಬಹುಜನ ಸಮಾಜ ಪಕ್ಷ -ಘೋಶಿ, ಉತ್ತರ ಪ್ರದೇಶ), ಪ್ರಧಾನ್ ಬರುವಾ (ಲಕ್ಷ್ಮೀಪುರ್, ಅಸ್ಸಾಂ) ಮತ್ತು ದೀಬೇಂದು ಅಧಿಕಾರಿ (ತಂಲುಕ್, ಪಶ್ಚಿಮ ಬಂಗಾಳ) ಈವರೆಗೆ ಲೋಕಸಭೆಯಲ್ಲಿ ಬಾಯಿಬಿಡದ ಸಂಸದರಾಗಿದ್ದಾರೆ

ರಾಜ್ಯದ ಸಮಸ್ಯೆಗಳನ್ನು ಕೇಂದ್ರಕ್ಕೆ ತಿಳಿಸಲೆಂದೇ ಆಯಾಯ ಕ್ಷೇತ್ರಕ್ಕೆ ಸಂಬಂಧಿಸಿದ ಜನ ಅವರನ್ನು ಆರಿಸಿ ಕಳುಹಿಸಿದ್ದಾರೆ. ಆದರೆ ಯಾವ ಸಂಸದನೂ ಜನರ ಪರ ಧ್ವನಿ ಎತ್ತದೆ ಕಳೆದ 5 ವರ್ಷಗಳಿಂದ ಸರ್ಕಾರ ನೀಡುವ ಸೌಲಭ್ಯಗಳನ್ನೆಲ್ಲಾ ಪಡೆದುಕೊಂಡು ಮಜಾ ಮಾಡಿ, ಆರಾಮದಾಯಕವಾಗಿ ಚಯರ್ ಬಿಸಿ ಮಾಡಿದ್ದು ಬಿಟ್ಟರೆ ಜನತೆಗಾಗಿ ಏನೂ ಮಾಡಿಲ್ಲ. ಮಾತ್ರವಲ್ಲ ರಾಜ್ಯ ಸರಕಾರದ ವಿರುದ್ಧ ನಾಲಿಗೆ ಹರಿಬಿಡಲು ಮಾತ್ರ ಇವರಿಗೆ ಧ್ವನಿ ಇದೆ. ರಾಜ್ಯದ ಜನರ ಪರ ಮಾತನಾಡಲು ಕಿಂಚಿತ್ತು ಮನಸ್ಸು ಮಾಡದೆ ಹಾಯಾಗಿ ವಿಮಾನದಲ್ಲಿ ಓಡಾಡಿಕೊಂಡು ಬಂದಿದ್ದಾರೆ.

ರಾಜ್ಯದ ಸಂಸದರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಲೋಕಸಭೆಯಲ್ಲಿ ಒಂದಕ್ಷರ ಕೂಡ ಮಾತನಾಡಲು ಧೈರ್ಯ ಇಲ್ಲದ ಇಂತವರು ಸಂಸದ ಸ್ಥಾನಕ್ಕೆ ನಾಲಾಯಕ್ಕು ಇಂತವರನ್ನು ಆಯ್ಕೆ ಮಾಡಲೇಬಾರದು ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹದಿನೇಳನೇ ಲೋಕಸಭೆಯ ಅವಧಿ ಮುಕ್ತಾಯಗೊಂಡಿದ್ದು, ಪ್ರಧಾನಿ ಮೋದಿಯವರು ಐದು ವರ್ಷದ ರಿಪೋರ್ಟ್ ಕಾರ್ಡ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಹದಿನೆಂಟನೇ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಈಗಿನಿಂದಲೇ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿವೆ.

ಕಳೆದ ಐದು ವರ್ಷದಲ್ಲಿ ಒಟ್ಟು 1,354 ಗಂಟೆ ಅಧಿವೇಶನ ನಡೆದಿದ್ದು, ಅದರಲ್ಲಿ ಒಂಬತ್ತು ಲೋಕಸಭಾ ಸದಸ್ಯರು ಗಪ್ ಚುಪ್ ಮಾತಾಡದೆ ಅಧಿವೇಶನದಲ್ಲಿ ಕುಳಿತು ಬೇರೆಯವರು ಮಾತನಾಡುವುದನ್ನಷ್ಟೇ ಕೇಳಿಸಿಕೊಂಡು ಬಿಟ್ಟಿದ್ದಾರೆ. ಈ ಒಂಬತ್ತು ಸಂಸದರಲ್ಲಿ ಮೂವರು ಸದಸ್ಯರಂತೂ ಒಂದೇ ಒಂದು ಪ್ರಶ್ನೆಯನ್ನು ಸ್ಪೀಕರ್ ಗೆ ಸಲ್ಲಿಸಿಲ್ಲ. ಉಳಿದ ಆರು ಸಂಸದವರು ಕಾಟಾಚಾರಕ್ಕಾದರೂ ಬಂದು ಕುಳಿತು ಸೌಲಭ್ಯಗಳನ್ನು ಬಳಿಸಿಕೊಂಡಿದ್ದಾರೆ.
ಈ 9 ಮಂದಿ ಸಂಸದರಲ್ಲಿ 6 ಜನ ಬಿಜೆಪಿಯವರು ಇಬ್ಬರು ತೃಣಮೂಲ ಕಾಂಗ್ರೆಸ್‌ಗೆ ಸೇರಿದವರು ಮತ್ತು ಓರ್ವ ಸಂಸದ ಬಹುಜನ ಸಮಾಜಪಕ್ಷದಿಂದ ಆಯ್ಕೆಯಾದವರಾಗಿದ್ದಾರೆ. ಇನ್ನು 17ನೇ ಲೋಕಸಭೆಯಲ್ಲಿ 222 ಬಿಲ್ ಅನುಮೋದನೆಗೊಂಡಿದೆ. 1,116 ಪ್ರಶ್ನೆಗಳಿಗೆ ಸಂಬಂಧ ಪಟ್ಟ ಸಚಿವರು ಮೌಕಿಕ ಉತ್ತರ ಪಡೆದುಕೊಂಡಿದ್ದಾರೆ.