
ನನಗೆ ಭಯವಾಗುತ್ತಿದೆ, ದಯವಿಟ್ಟು ಬಂದು ಕಾಪಾಡಿ” ಎಂದು ರಕ್ಷಣಾ ಕಾರ್ಯಕರ್ತರಿಗೆ ಕರೆ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ದ ಗಾಝಾದ 6 ವರ್ಷದ ಬಾಲಕಿ ಹಿಂದ್ ರಜಬ್ಳ ಮೃತದೇಹ 12 ದಿನಗಳ ಬಳಿಕ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಲಕಿಯ ಕುಟುಂಬ ಸಂಚರಿಸುತ್ತಿದ್ದ ಕಾರಿನ ಮೇಲೆ ಇಸ್ರೇಲಿ ಸೇನಾಪಡೆ ದಾಳಿ ಮಾಡಿದ್ದ ಸಂದರ್ಭ ಆಕೆ ಸಹಾಯಕ್ಕಾಗಿ ಪ್ಯಾಲಿಸ್ತೀನ್ ರೆಡ್ ಕ್ರೆಸೆಂಟ್ ಸಂಸ್ಥೆಗೆ ಕರೆ ಮಾಡಿದ್ದಳು ಎಂದು ವರದಿಗಳು ಹೇಳಿವೆ.

ಇಸ್ರೇಲ್ ಸೈನಿಕರ ದಾಳಿಯಲ್ಲಿ ಕುಟುಂಬಸ್ಥರು ಹತ್ಯೆಯಾದಾಗ ಸುಮಾರು ಮೂರು ಗಂಟೆಗಳ ಕಾಲ ಹಿಂದ್ ರಜಬ್ ಕಾರಿನೊಳಗೆ ಮೃತ ದೇಹಗಳೊಂದಿಗೆ ಇದ್ದಳು. ಈ ವೇಳೆ ಆಕೆ ರೆಡ್ ಕ್ರೆಸೆಂಟ್ಗೆ ಕರೆ ಮಾಡಿ “ನನಗೆ ಭಯವಾಗುತ್ತಿದೆ. ನನ್ನನ್ನು ಕರೆದುಕೊಂಡು ಹೋಗಿ” ಎಂದಿದ್ದಾಳೆ. ಈ ವೇಳೆ ಆ ಕಡೆಯಿಂದ ಆಕೆಗೆ ಧೈರ್ಯ ತುಂಬಿದ್ದ ರೆಡ್ ಕ್ರೆಸೆಂಟ್ನ ರಕ್ಷಣಾ ಕಾರ್ಯರ್ತೆ, “ಹೆದರಬೇಡ ಪುಟ್ಟ, ನಾವು ಬರುತ್ತಿದ್ದೇವೆ. ನಿನ್ನನ್ನು ರಕ್ಷಿಸುತ್ತೇವೆ” ಎಂದು ಹೇಳಿರುವ ಕಾಲ್ ರೆಕಾರ್ಡ್ ಹೃದಯ ವಿದ್ರಾವಕವಾಗಿದೆ

ವರದಿಗಳ ಪ್ರಕಾರ, ಬಾಲಕಿ ಕರೆ ಮಾಡಿದ ತಕ್ಷಣ ರೆಡ್ ಕ್ರೆಸೆಂಟ್ ಇಬ್ಬರು ವೈದ್ಯಕೀಯ ಸಿಬ್ಬಂದಿಯೊಂದಿಗೆ ಆಕೆ ಇರುವ ಸ್ಥಳಕ್ಕೆ ಆಂಬ್ಯುಲೆನ್ಸ್ ಕಳಿಸಿತ್ತು. ಬಳಿಕ ಆಂಬ್ಯುಲೆನ್ಸ್ ಸಂಪರ್ಕ ಕಳೆದುಕೊಂಡಿತ್ತು. ಜನವರಿ 29ರಂದು ಈ ಘಟನೆ ನಡೆದಿದೆ.
ಘಟನೆ ನಡೆದು ಎರಡು ವಾರಗಳ ಬಳಿಕ ಶನಿವಾರ (ಫೆ.10) ಗಾಝಾದ ಟೆಲ್ ಅಲ್ ಹವಾ ಪ್ರದೇಶದಲ್ಲಿ ಸುಟ್ಟು ಕರಕಲಾದ ಕಾರಿನೊಳಗೆ ಮೃತದೇಹಗಳು ಸಿಕ್ಕಿವೆ. ಅದರಲ್ಲಿ ಹಿಂದ್ ರಜಬ್ಳ ಶವವೂ ಇತ್ತು ಎಂದು ವರದಿಗಳು ಹೇಳಿವೆ. ಬಾಲಕಿ ಸಹಾಯಕ್ಕಾಗಿ ಕೋರಿದಾಗ ರೆಡ್ ಕ್ರೆಸೆಂಟ್ ಕಳಿಸಿದ್ದ ಆಂಬ್ಯುಲೆನ್ಸ್ ಕೂಡ ಅಲ್ಲೆ ಅಣತಿ ದೂರದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಇಬ್ಬರು ವೈದ್ಯಕೀಯ ಸಿಬ್ಬಂದಿಯ ಮೃತದೇಹಗಳು ದೊರೆತಿವೆ ಎಂದು ರೆಡ್ ಕ್ರೆಸೆಂಟ್ ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇಸ್ರೇಲ್ ಪಡೆಗಳಿಂದ ತಪ್ಪಿಸಿಕೊಳ್ಳಲು ಹಿಂದ್ ರಜಬ್ಳ ಕುಟುಂಬ ಗಾಝಾದಿಂದ ದೂರ ಹೊರಟಿತ್ತು. ಈ ವೇಳೆ ಇಸ್ರೇಲ್ ಟ್ಯಾಂಕರ್ಗಳು ಅವರ ಕಾರಿನ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. ದಾಳಿ ಬಳಿಕ ರೆಡ್ ಕ್ರೆಸೆಂಟ್ಗೆ ಕರೆ ಮಾಡಿದ್ದ ರಜಬ್ ಹಿಂದ್ ಕೂಡ ಆ ಬಳಿಕ ಸಾವನ್ನಪ್ಪಿದ್ದಾಳೆ. ಆಕೆಗೆ ಸಹಾಯ ಮಾಡಲು ತೆರಳುತ್ತಿದ್ದ ಆಂಬ್ಯುಲೆನ್ಸ್ ಮೇಲೆಯೂ ದಾಳಿ ಮಾಡಿ ಸುಟ್ಟು ಹಾಕಲಾಗಿದೆ. ಅದರಲ್ಲಿದ್ದ ಇಬ್ಬರು ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಕನಿಷ್ಠ ಮಾನವೀಯತೆ ಇಲ್ಲದೆ 6 ವರ್ಷ ಬಾಲಕಿ ಮತ್ತು ಆಕೆಗೆ ಸಹಾಯ ಮಾಡಲು ತೆರಳುತ್ತಿದ್ದ ಆಂಬ್ಯುಲೆನ್ಸ್ ಅನ್ನು ಇಸ್ರೇಲಿ ಪಡೆಗಳು ಸುಟ್ಟು ಹಾಕಿವೆ. ಇದು ಯುದ್ದಪರಾಧವಲ್ಲದೆ ಇನ್ನೇನು? ಎಂದು ಮಾಧ್ಯಮಗಳು ಪ್ರಶ್ನಿಸಿವೆ.