
ಹೊಸದಿಲ್ಲಿ: ದೇಶದಲ್ಲಿ ಈಗ 96.88 ಕೋಟಿ ಅರ್ಹ ಮತದಾರರಿದ್ದಾರೆ.ದೇಶದ ಚುನಾವಣ ಆಯೋಗ ಶುಕ್ರವಾರ ನೀಡಿದ ಮಾಹಿತಿಯಿದು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾನಕ್ಕೆ 96.88 ಕೋಟಿ ಭಾರತೀಯರು ಅರ್ಹರಾಗಿದ್ದಾರೆ ಎಂದು ಆಯೋಗ ತಿಳಿಸಿದೆ.

18ರಿಂದ 29 ವರ್ಷ ವಯೋ ಮಾನದ 2 ಕೋಟಿಗೂ ಅಧಿಕ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ನೋಂದಾಯಿತ ಮತದಾರರ ಸಂಖ್ಯೆ ಶೇ.6ರಷ್ಟು ಏರಿಕೆಯಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ. 2019ರಲ್ಲಿ ಮತದಾರರ ಸಂಖ್ಯೆ 91.20 ಕೋಟಿ ಆಗಿತ್ತು.ವಿಶ್ವದಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ದೇಶ ನಮ್ಮದಾಗಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಗಾಗಿ 96.88 ಕೋಟಿ ಭಾರತೀಯರು ಮತದಾನ ಮಾಡಲು ನೋಂದಣಿಯಾಗಿದ್ದಾರೆ. ಲಿಂಗ ಅನುಪಾತನವು 2023ರಲ್ಲಿ 940 ಇದ್ದದ್ದು, 2024ರಲ್ಲಿ 948ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 1 ಸಾವಿರ ಪುರುಷರಿಗೆ 948 ಮಹಿಳೆಯರಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಚುನಾವಣ ಆಯೋಗವು ಪಾರದರ್ಶಕತೆಗೆ ವಿಶೇಷ ಒತ್ತು ನೀಡಿದೆ ಎಂದು ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಮಹಿಳೆಯರೇ ಹೆಚ್ಚು
ಸುಮಾರು 2.63 ಕೋಟಿ ಮಂದಿ ಯನ್ನು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಗೊಳಿಸ ಲಾಗಿದೆ. ಈ ಪೈಕಿ 1.41 ಕೋಟಿ ಮಹಿಳೆಯರಾಗಿದ್ದರೆ, 1.22 ಕೋಟಿ ಪುರುಷರು. ಅಂದರೆ ಪುರುಷ ಮತದಾರರಿಗೆ ಹೋಲಿಸಿದರೆ ಹೊಸದಾಗಿ ಸೇರ್ಪಡೆಗೊಂಡ ಮಹಿಳೆ ಯರ ಪ್ರಮಾಣ ಶೇ. 15ರಷ್ಟು ಹೆಚ್ಚಳವಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ. 88.35 ಲಕ್ಷ ದಿವ್ಯಾಂಗರನ್ನೂ ಪಟ್ಟಿಗೆ ಸೇರಿಸಲಾಗಿದ್ದು, ಇದು ಹಕ್ಕು ಚಲಾವಣೆಯಲ್ಲಿ ಎಲ್ಲರನ್ನೂ ಪಾಲ್ಗೊಳ್ಳು ವಂತೆ ಮಾಡುವಲ್ಲಿ ನೆರವಾಗಲಿದೆ ಎಂದಿದೆ. 2019ರ ಚುನಾವಣೆಯ ವೇಳೆ ದಿವ್ಯಾಂಗ ಮತದಾರರ ಸಂಖ್ಯೆ 45.64 ಲಕ್ಷವಾಗಿತ್ತು.

1.65 ಲಕ್ಷ ಹೆಸರು ಡಿಲೀಟ್
ಈ ಬಾರಿ ಮನೆ-ಮನೆಗೆ ತೆರಳಿ ದೃಢೀಕರಣ ಪ್ರಕ್ರಿಯೆ ಕೈಗೊಂಡು, ಸುಮಾರು 1.65 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಮೃತಪಟ್ಟವರು, ಖಾಯಂ ಆಗಿ ಬೇರೆಡೆಗೆ ವಲಸೆ ಹೋದವರು ಮತ್ತು ಡುಪ್ಲಿಕೇಟ್ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದೂ ಆಯೋಗ ತಿಳಿಸಿದೆ.

ಇನ್ನು ತೃತೀಯ ಲಿಂಗಿ ಮತದಾರರ ಸಂಖ್ಯೆ 2014ರಲ್ಲಿ 39 ಸಾವಿರ ಇದ್ದದ್ದು, ಈ ಬಾರಿ 48 ಸಾವಿರಕ್ಕೆ ಏರಿಕೆಯಾಗಿದೆ ಎಂದೂ ಮಾಹಿತಿ ನೀಡಿದೆ.