
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಅಸಂವಿಧಾನಿಕ ಸಿಎಎ ಕಾಯ್ದೆ ಮತ್ತೆ ಮುನ್ನೆಲೆಗೆ ಬಂದಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡಿನಲ್ಲಿ ಎಂದಿಗೂ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಬುಧವಾರ ಹೇಳಿದ್ದಾರೆ. ಈ ಕಾಯ್ದೆ ಮುಸ್ಲಿಮರು ಮತ್ತು ಶ್ರೀಲಂಕಾ ತಮಿಳರ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಒಂದು ವಾರದಲ್ಲಿ ದೇಶದಾದ್ಯಂತ ಸಿಎಎ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂಬ ಕೇಂದ್ರ ಸಚಿವ ಸಂತಾನು ಠಾಕೂರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಸ್ಟಾಲಿನ್ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡಿಗೆ ಕಾಲಿಡಲು ನಾವು ಬಿಡುವುದಿಲ್ಲ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಎಂ ಕೆ ಸ್ಟಾಲಿನ್ ಅವರು ಬಿಜೆಪಿಯ ಮಿತ್ರಪಕ್ಷವಾಗಿದ್ದ ಎಐಎಡಿಎಂಕೆಯನ್ನು ರಾಜ್ಯಸಭೆಯಲ್ಲಿ ಸಿಎಎ ಮಸೂದೆಯನ್ನು ಬೆಂಬಲಿಸಿದ್ದಕ್ಕಾಗಿ ಟೀಕಿಸಿದ್ದು, ತಮಿಳುನಾಡಿನಲ್ಲಿ ಡಿಎಂಕೆ ವಿರೋಧ ಪಕ್ಷದಲ್ಲಿದ್ದಾಗ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಿತ್ತು. ಡಿಎಂಕೆ ಸಿಎಎ ಅನುಷ್ಠಾನದ ವಿರುದ್ಧ 20 ಮಿಲಿಯನ್ ಸಹಿಗಳನ್ನು ಸಂಗ್ರಹಿಸಿತ್ತು ಮತ್ತು ಅದನ್ನು ಅಂದಿನ ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಿತ್ತು. ನಾವು 2021ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ, ಸಿಎಎ ಹಿಂಪಡೆಯಲು ಒತ್ತಾಯಿಸಿ ನಾವು ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದ್ದೇವೆ. ಡಿಎಂಕೆ ಸರ್ಕಾರವು ತಮಿಳುನಾಡಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ವಿರುದ್ಧವಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದು, ಅದನ್ನು ಎಐಎಡಿಎಂಕೆಯ ಬೆಂಬಲಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಯನ್ನು ಎಐಎಡಿಎಂಕೆ ಬೆಂಬಲಿಸಿರದಿದ್ದರೆ ಅದು ಕಾನೂನಾಗುತ್ತಿರಲಿಲ್ಲ. ಶಾಸನವು ಶ್ರೀಲಂಕಾ ನಿರಾಶ್ರಿತರು ಮತ್ತು ಮುಸ್ಲಿಮರ ವಿರುದ್ಧ ತಾರತಮ್ಯವನ್ನುಂಟು ಮಾಡುತ್ತದೆ ಎಂದು ಸ್ಟ್ಯಾಲಿನ್ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಎಐಎಡಿಎಂಕೆ ಬಿಜೆಪಿ ಮೈತ್ರಿಕೂಟವನ್ನು ತೊರೆದಿತ್ತು. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸ್ಟಾಲಿನ್‌ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಬಿಜೆಪಿಯನ್ನು ಡಿಎಂಕೆ ಕೇವಲ ಬಾಯಿ ಮಾತಿನಲ್ಲಿ ಮಾತ್ರ ವಿರೋಧಿಸುತ್ತಿದೆ. ಸಿಎಎ ಅಲ್ಪಸಂಖ್ಯಾತರ ಮೇಲೆ ಪ್ರಭಾವ ಬೀರಲು ಎಐಎಡಿಎಂಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಏನಿದು ಸಿಎಎ:
ಮೋದಿ ಸರ್ಕಾರವು ಅಂಗೀಕರಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಕಾಯ್ದೆಯು ಡಿಸೆಂಬರ್ 31, 2014ರೊಳಗೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುತ್ತದೆ. CAA ಡಿಸೆಂಬರ್ 2019ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದ್ದು, ಆ ಬಳಿಕ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ಭಾರತದ ಸಂವಿಧಾನದಲ್ಲಿ ಅವಕಾಶ ಇಲ್ಲ, ಆದ್ದರಿಂದ ಈ ಅಸಂವಿಧಾನಿಕ ಕಾಯ್ದೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.