
ಮಂಗಳೂರು, ಜನವರಿ 28: ಪಟಾಕಿ ಗೋದಾಮಿನಲ್ಲಿ ಸ್ಫೋಟಗೊಂಡು ಮೂವರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ದುರಂತ ಸಂಭವಿಸಿದೆ. ಕೇರಳ ಮೂಲದ ಸ್ವಾಮಿ(55), ವರ್ಗಿಸ್(68) ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಚೇತನ್(25) ಮೃತರು. ಬಶೀರ್ ಎಂಬುವರಿಗೆ ಸೇರಿದ ಸಾಲಿಡ್ ಫೈರ್ ವರ್ಕ್ಸ್ ಪಟಾಕಿ ಗೋದಾಮಿನಲ್ಲಿ ಅವಘಡ ಸಂಭವಿಸಿದೆ. ಪಟಾಕಿ ಸ್ಫೋಟದ ರಭಸಕ್ಕೆ ಗೋದಾಮಿನಿಂದ ಹೊರಗೆ ಕಾರ್ಮಿಕ ಹಾರಿಬಿದ್ದಿದ್ದಾರೆ. ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ಕುಕ್ಕೇಡಿಯ ಬಶೀರ್ ಎಂಬವರ ಜಮೀನಿನಲ್ಲಿ ಪಟಾಕಿ ತಯಾರಿಸುತ್ತಿದ್ದರು. ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಇಲ್ಲಿ ಪಟಾಕಿ ತಯಾರಿಸುತ್ತಿದ್ದರು. ತ್ರಿಶೂರಿನ ವರ್ಗೀಸ್, ಹಾಸನ ಅಂಕನಾಯಕನಹಳ್ಳಿ ಚೇತನ್, ಕೇರಳದ ಸ್ವಾಮಿ ಮೃತಪಟ್ಟವರು. ಮೃತರ ಪೈಕಿ ಓರ್ವನ ಮೃತದೇಹ ದೊರೆತಿದ್ದು, ಇನ್ನಿಬ್ಬರ ದೇಹದ ಭಾಗಗಳು ಸ್ಫೋಟದ ರಭಸಕ್ಕೆ ಛಿದ್ರವಾಗಿ ಚದುರಿ ಬಿದ್ದಿವೆ. ಇಲ್ಲಿ ಹಾಸನದ ದಿನೇಶ, ಕಿರಣ, ಅರಸೀಕೆರೆಯ ಕುಮಾರ , ಚಿಕ್ಕಮಾರಹಳ್ಳಿಯ ಕಲ್ಲೇಶ, ಕೇರಳದ ಪ್ರೇಮ್ ಕೇರಳ, ಕೇಶವ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ತಕ್ಷಣ ಬೆಂಕಿನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರೂ. ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಸ್ಥಳದಲ್ಲಿ ಶೆಡ್ ಸಂಪೂರ್ಣ ಧ್ವಂಸವಾಗಿದ್ದು, ಇದರ ಸದ್ದು 4 ಕಿ.ಮೀ. ದೂರಕ್ಕೆ ಕೇಳಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಾಲಿಡ್ ಫೈರ್ ವರ್ಕ್ಸ್’ ಎಂಬ ಈ ಪಟಾಕಿ ತಯಾರಿಕೆ ಘಟಕ 50 ವರ್ಷಗಳಿಂದ ಇದೆ. ಇಲ್ಲಿ ಪಟಾಕಿ ತಯಾರಿಸಿ ಹಲವಾರು ಜಾತ್ರೆ ಹಾಗೂ ಇತರ ಕಾರ್ಯಕ್ರಮಗಳಿಗೆ ಪೂರೈಸುತ್ತಿದ್ದರ. ಇದಕ್ಕೆ ಪರವಾನಗಿ ಇತ್ತೇ ಎಂಬುದು ಖಚಿತವಾಗಿಲ್ಲ. ಘಟನೆ ನಡೆದ ಜಾಗ ವೇಣೂರು ಠಾಣೆ ವ್ಯಾಪ್ತಿಯಲ್ಲಿ ಬರುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್ಪಿ ರಿಷ್ಯಂತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

