
ಬಂಟ್ವಾಳ, ಜ 22 : ತಾಲೂಕಿನ ವಗ್ಗ ಸಮೀಪದ ಮೇನಾಡು ಎಂಬಲ್ಲಿ ಮುಸುಕುಧಾರಿಗಳ ತಂಡ ಮನೆಯೊಂದಕ್ಕೆ ನುಗ್ಗಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಗೈದ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣ ದ ಆರೋಪಿಗಳಾದ 7 ಜನರನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದ ಮಲ್ಲಾರು ನಿವಾಸಿ ಗಣೇಶ ನಾಯ್ಕ (26), ದಿನೇಶ್ ನಾಯ್ಕ (22), ಸಾಗರ ಶೆಟ್ಟಿ (21) ಮಂಗಳೂರು, ಐಕಳ ಗ್ರಾಮದ ರಾಕೇಶ್ ಎಲ್. ಪಿಂಟೋ (29), ಕಡಬ ಬೆಳಂದೂರು ಗ್ರಾಮದ ಎಂ.ಸೀತಾರಾಮ @ ಪ್ರವೀಣ್ (36), ಸುಧೀರ್ (29) ಹಾಗೂ ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದ ವ್ಯಾಪಾರಿ ಚಿಕ್ಕಮಗಳೂರಿನ ಗೌರಿ ಕಾಲುವೆಯಲ್ಲಿ ವಾಸವಾಗಿದ್ದ ಮಹಮ್ಮದ್ ಹನೀಫ್ (49) ಎಂದು ಗುರುತಿಸಲಾಗಿದೆ.

ಬಂಧಿತರಿಂದ ದರೋಡೆಗೈದ 3.15 ಲಕ್ಷ ಮೌಲ್ಯದ 54 ಗ್ರಾಂ ಚಿನ್ನಾಭರಣ ಹಾಗೂ ರೂ. 8 ಲಕ್ಷ ಮೌಲ್ಯದ ಇನ್ನೋವಾ ಕಾರು ಹಾಗು ಅಂದಾಜು ರೂ. 2 ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜ.11 ರ ಗುರುವಾರದಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಮೇನಾಡು ನಿವಾಸಿ ಮರೀಟಾ ಸಿಂಥಿಯಾ ಪಿಂಟೋ ಎಂಬವರ ಮನೆಗೆ ಬಂದ ಮುಸುಕುದಾರಿಗಳು ಮನೆಯಲ್ಲಿದ್ದ ತಾಯಿ ಪ್ಲೋರಿನಾ ಪಿಂಟೊ ಹಾಗೂ ಮಗಳು ಮರಿಟಾ ಪಿಂಟೋ ಅವರಿಗೆ ಚೂರಿ ತೋರಿಸಿ ಗೊದ್ರೇಜ್ ಕೀ ನೀಡುವಂತೆ ಹೆದರಿಸಿದ್ದು, ನೀಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿ ಕಪಾಟಿನ ಕೀ ಪಡೆದು ಚಿನ್ನ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣವನ್ನು ಪತ್ತೆ ಹಚ್ಚಲು ಮೂರು ವಿಶೇಷ ತಂಡವನ್ನು ರಚಿಸಿದ್ದರು. ಪೊಲೀಸರ ವಿಶೇಷ ಪ್ರಯತ್ನದ ಮೂಲಕ ಆರೋಪಿಗಳ ಪತ್ತೆ ಕಾರ್ಯವನ್ನು ಮೆಚ್ಚಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಹುಮಾನವನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.