
ಮೈಸೂರು: ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆ ಸಂಭ್ರಮದ ನಡುವೆ ಮೈಸೂರಿನಲ್ಲಿ ಗಲಾಟೆ ನಡೆದಿದೆ. ಈ ವೇಳೆ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹಗೆ ಮುತ್ತಿಗೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ರಾಮಲಲ್ಲಾ ಮೂರ್ತಿ ನಿರ್ಮಿಸಲು ಶಿಲೆ ಸಿಕ್ಕ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ಹಾಕಲಾಗಿತ್ತು. ಅದರಂತೆಯೇ ಇಂದು ಭೂಮಿ ಪೂಜೆ ನಡೆಯಬೇಕಿತ್ತು. ಆದರೆ ಈ ತಯಾರಿ ವೇಳೆ ಭೂಮಿ ಪೂಜೆಗೆ ಬಂದಿದ್ದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪ್ರತಾಪ್ ಸಿಂಹ ವಿರುದ್ಧ ದಲಿತ ವಿರೋಧಿ ಎಂದು ಕಿಡಿಕಾರಿದ್ದಾರೆ. ಈ ವಿರೋಧದ ಹಿನ್ನೆಲೆ ಮೈಸೂರು ಸಂಸದ ವಾಪಸ್ ತೆರಳಿದ್ದಾರೆ.

ಆಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ರಾಮಲಲ್ಲಾ ಮೂರ್ತಿಯ ಕೃಷ್ಣ ಶಿಲೆ ಕಲ್ಲು ಹಾರೋಹಳ್ಳಿ ಬಳಿಯ ಗಯಜ್ಜೇಗೌಡನಪುರದ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿತ್ತು. ಈ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಅವರು ಈ ಹಿಂದೆ ತಿಳಿಸಿದ್ದರು. ಹೀಗಾಗಿ ಇಂದು ಭೂಮಿಪೂಜೆ ಮತ್ತು ರಾಮನ ಪೂಜೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದರು. ಈ ವೇಳೆ ಕೆಲ ಸ್ಥಳೀಯರು ಸಂಸದರನ್ನು ಘೇರಾವ್ ಹಾಕಿ ಮಹಿಷಾ ದಸರಕ್ಕೆ ವಿರೋಧ ನೆಪ ಹೇಳಿಕೊಂಡು ಅಪಮಾನ ಮಾಡಿ ದಲಿತ ವಿರೋಧಿ ಎಂದು ಕರೆದು ಕಾರ್ಯಕ್ರಮಕ್ಕೆ ಬರದಂತೆ ತಡೆದು ಹಿಂದಕ್ಕೆ ಕಳುಹಿಸಿದ್ದಾರೆ
ಇದರಿಂದ ಬೇಸರಕೊಂಡ ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಹೊರ ನಡೆದರು. ಜಾತ್ಯಾತೀತವಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಜಾತಿ ತಂದು ಗಲಾಟೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಸದಸ್ಯ ಹಾರೋಹಳ್ಳಿ ಸುರೇಶ್, ದಸಂಸ ಮುಖಂಡ ನಟರಾಜ್, ಗ್ರಾಮಸ್ಥರಾದ ಚಲುವರಾಜ್, ಸೋಮಶೇಖರ್, ಬೀರಪ್ಪ, ಧನಗಳ್ಳಿ ಸ್ವಾಮಿ, ರಾಜೇಶ್ ರಾಜೇಂದ್ರ, ಕಿರಣ್, ಸಿ.ಡಿ.ಚಲುವರಾಜು, ಸುನೀಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.