
ಬೆಂಗಳೂರು: PSI ಎಕ್ಸಾಂಗೂ ಅಕ್ರಮಕ್ಕೂ ಎಲ್ಲಿಲ್ಲದ ನಂಟು ಅನ್ಸುತ್ತೆ. 2 ವರ್ಷದ ಹಿಂದಿನ PSI ಪರೀಕ್ಷಾ ನೇಮಕಾತಿ ಪ್ರಕರಣದ ಜಂಜಾಟವೇ ಇನ್ನೂ ಮುಗಿದಿಲ್ಲ. ಅಂತದ್ರಲ್ಲಿ ಮತ್ತೆ ನಡೆಯುತ್ತಿರೋ ಮರುಪರೀಕ್ಷೆಯಲ್ಲೂ ಅಕ್ರಮದ ಆರೋಪ ಕೇಳಿ ಬಂದಿದೆ.
PSI ಮರುಪರೀಕ್ಷೆಯಲ್ಲೂ ಅಕ್ರಮದ ಹೊಗೆ!
ಹೌದು, 545 PSI ನೇಮಕಾತಿ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಯೋ ವೇಳೆಯೇ ಸರ್ಕಾರ PSI ಹುದ್ದೆಗಳ ಮರುಪರೀಕ್ಷೆಗೆ ಆದೇಶಿಸಿತ್ತು. ಅದರಂತೆ ಜನವರಿ 21ರಂದು KEAಯಿಂದ ಪರೀಕ್ಷೆಗೆ ಸಿದ್ದತೆ ನಡೆಸಲಾಗಿದೆ. ಆದ್ರೆ ಪರಿಕ್ಷೆಗೆ 2 ದಿನ ಇರುವಾಗಲೇ PSI ಹುದ್ದೆಗಳು ಲಕ್ಷಲಕ್ಷಕ್ಕೆ ಸೇಲ್ ಆಗ್ತಿರೋ ಆರೋಪ ಕೇಳಿಬಂದಿದೆ. ಈ ಬಾರಿಯಾದ್ರೂ ಪರೀಕ್ಷೆ ಪಾಸ್ ಆಗಿ ಕನಸಿನ ಹುದ್ದೆ ಪಡೆಯಬೇಕೆಂದಿದ್ದ ಅಭ್ಯರ್ಥಿಗಳು ರೊಚ್ಚಿಗೆದ್ದಿದ್ದಾರೆ.

ಇದೇ ತಿಂಗಳ 23 ರಂದು ಅಂದ್ರೆ ಇನ್ನು ಮೂರು ದಿನಗಳಲ್ಲಿ ನಡೆಯಬೇಕಿದ್ದ PSI ಪರೀಕ್ಷೆ ಹಾಗೂ ನಾಳೆ ನಡೆಯಲಿರೋ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಪರೀಕ್ಷೆಗೆ ಅಕ್ರಮದ ನಂಟು ಅಂಟಿರೋ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೆಲವು ಅಭ್ಯರ್ಥಿಗಳು, ವಿದ್ಯಾರ್ಥಿ ಸಂಘಟನೆ ಸದಸ್ಯರು ನಿನ್ನೆ ರಾತ್ರಿ ಚಂದ್ರ ಲೇಔಟ್ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದ್ದು, ರಾಜ್ಯ ಗುಪ್ತಚರ ವಿಭಾಗದ PSI ಲಿಂಗಯ್ಯ ಎಂಬುವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೆಲ ಅಭ್ಯರ್ಥಿಗಳು ಇದಕ್ಕೆ ಸಂಬಂಧಪಟ್ಟ ಆಡಿಯೋ, ಚಾಟಿಂಗ್ ಫೋಟೋಗಳನ್ನ ರಿಲೀಸ್ ಮಾಡಿದ್ದು, ಬರೋಬ್ಬರಿ 80 ಲಕ್ಷ ಕೊಟ್ಟರೇ ಎಕ್ಸಾಂ ದಿನಕ್ಕಿಂತ ಮುಂಚಿತವೇ ಸೀಕ್ರೆಟ್ ಆಗಿ ಪರೀಕ್ಷೆ ಬರೆಸಿ ಹುದ್ದೆ ಕೊಡಿಸುವುದಾಗಿ ಲಿಂಗಯ್ಯ ಆಮಿಷ ಒಡ್ಡಿದ್ರಂತೆ. ಹೀಗಾಗಿ ಪರೀಕ್ಷೆಗಳನ್ನ ಮುಂದೂಡುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಸಿಸಿಬಿಯಿಂದ PSI ಲಿಂಗಯ್ಯ ವಿಚಾರಣೆ ವೇಳೆ ಟ್ವಿಸ್ಟ್!
ಯಾವಾಗ PSI ಲಿಂಗಯ್ಯ ವಿರುದ್ಧ ಆರೋಪ ಕೇಳಿಬಂತೋ ಅಲರ್ಟ್ ಆದ ಸಿಸಿಬಿ ಟೀಂ ಲಿಂಗಯ್ಯರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆದ್ರೆ ವಿಚಾರಣೆ ವೇಳೆ ಲಿಂಗಯ್ಯ ಕೆಲವು ಮಾಹಿತಿ ನೀಡಿದ್ದು, ಇದ್ರಿಂದ ತಾವೇ ತೋಡಿದ ಹಳ್ಳಕ್ಕೆ ತಾವೇ ಬಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಯಾಕಂದ್ರೆ ಗುಪ್ತಚರ ಇಲಾಖೆಯಲ್ಲಿ 2018ರಿಂದಲೂ ಕಾರ್ಯನಿರ್ವಹಿಸುತ್ತಿರೋ ಲಿಂಗಯ್ಯ ಕಳೆದ ಬಾರಿಯಂತೆ ಈ ಬಾರಿಯೂ PSI ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿದ್ಯಾ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ರಂತೆ. ಹೀಗಾಗಿ ಅಕ್ರಮ ನಡೆಸೋರಿಗೆ ಗಾಳ ಹಾಕಲು ಹೋಗಿ ತಾವೇ ಗಾಳದಲ್ಲಿ ಸಿಕ್ಕಿದ್ರಾ ಅನ್ನೋ ಅನುಮಾನ ಮೂಡಿದೆ. ಈ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ ಕೂಡ ಸ್ಪಷ್ಟನೆ ನೀಡಿದ್ದು, ಅಭ್ಯರ್ಥಿಗಳು ಆತಂಕ ಪಡಬೇಕಿಲ್ಲ ಎಂದಿದ್ದಾರೆ.

ಒಟ್ನಲ್ಲಿ ಮೂರು ವರ್ಷದ ಬಳಿಕ ನಡೆಯುತ್ತಿರೋ PSI ಪರೀಕ್ಷೆಗೆ ಅಕ್ರಮದ ಭೂತ ಬೆನ್ನು ಹತ್ತಿದೆ. ಆದ್ರೆ ಸದ್ಯಕ್ಕಂತು ಮೇಲ್ನೋಟಕ್ಕೆ ಯಾವುದೇ ಅಕ್ರಮ ಕಂಡುಬಾರದ ಹಿನ್ನೆಲೆ ನಾಳಿನ ಎಕ್ಸಾಂ ಅಡೆತಡೆ ಇಲ್ಲದೇ ನಡೀತಿದೆ.