
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶನಿವಾರ ಮತ್ತೊಮ್ಮೆ ರಾಮ ಜನ್ಮಭೂಮಿ ದೇಗುಲದಲ್ಲಿ ರಾಮನ ಪ್ರಾಣ ಪ್ರತಿಷ್ಠೆಯಯನ್ನು ಪ್ರಶ್ನಿಸಿದ್ದು, 500 ವರ್ಷಗಳಿಂದ ನಮಾಝ್ ಮಾಡುತ್ತಿದ್ದ ಬಾಬ್ರಿ ಮಸೀದಿಯನ್ನು ವ್ಯವಸ್ಥಿತವಾಗಿ ಭಾರತೀಯ ಮುಸ್ಲಿಮರಿಂದ ಕಿತ್ತುಕೊಳ್ಳಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ರಚನೆಯ ಸಮಯದಲ್ಲಿ ಅಯೋಧ್ಯೆಯಲ್ಲಿ ದೇವಾಲಯ ಅಸ್ತಿತ್ವದಲ್ಲಿರಲಿಲ್ಲ. 1992 ರಲ್ಲಿ ಮಸೀದಿಯನ್ನು ಕೆಡವದಿದ್ದರೆ, ಮುಸ್ಲಿಮರು ಇಂದಿನ ಪರಿಸ್ಥಿತಿಯನ್ನು ನೋಡಬೇಕಾಗಿರಲಿಲ್ಲ ಎಂದಿದ್ದಾರೆ.

500 ವರ್ಷಗಳಿಂದ ಬಾಬ್ರಿ ಮಸೀದಿಯಲ್ಲಿ ಮುಸ್ಲಿಮರು ನಮಾಝ್ ಮಾಡಿದ್ದರು. ಕಾಂಗ್ರೆಸ್‌ನ ಜಿಬಿ ಪಂತ್ ಉತ್ತರ ಪ್ರದೇಶದ ಸಿಎಂ ಆಗಿದ್ದಾಗ ಮಸೀದಿಯೊಳಗೆ ವಿಗ್ರಹಗಳನ್ನು ಇರಿಸಲಾಗಿತ್ತು. ಆ ಸಮಯದಲ್ಲಿ ನಾಯರ್ ಅಯೋಧ್ಯೆಯ ಕಲೆಕ್ಟರ್ ಆಗಿದ್ದರು. ಅವರು ಮಸೀದಿಯನ್ನು ಮುಚ್ಚಿ ಪೂಜೆ ಮಾಡಲು ಅನುವು ಮಾಡಿ ಕೊಟ್ಟಿದ್ದರು. ವಿಹೆಚ್‌ಪಿ ರಚನೆಯಾದಾಗ ಅಲ್ಲಿ ರಾಮ ಮಂದಿರ ಇರಲಿಲ್ಲ” ಎಂದು ಒವೈಸಿ ಹೇಳಿದ್ದಾರೆ.

“ಮಹಾತ್ಮ ಗಾಂಧಿಯವರು ರಾಮ ಮಂದಿರದ ಬಗ್ಗೆ ಎಂದಿಗೂ ಪ್ರಸ್ತಾಪಿಸಿರಲಿಲ್ಲ. ಆದರೆ, ಬಹಳ ವ್ಯವಸ್ಥಿತವಾಗಿ ಭಾರತೀಯ ಮುಸ್ಲಿಮರಿಂದ ಬಾಬ್ರಿ ಮಸೀದಿಯನ್ನು ಕಿತ್ತುಕೊಳ್ಳಲಾಯಿತು. ಮಾಜಿ ಸಿಎಂ ಜಿಬಿ ಪಂತ್ ಅವರು ಅಂದೇ ಮಸೀದಿಯಿಂದ ವಿಗ್ರಹಗಳನ್ನು ತೆಗೆದು ಹಾಕಿದ್ದರೆ ಮತ್ತು 1992ರಲ್ಲಿ ಮಸೀದಿಯನ್ನು ಕೆಡವದಿದ್ದರೆ ನಾವು ಇಂದಿನ ಪರಿಸ್ಥಿತಿಯನ್ನು ನೋಡಬೇಕಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಸಮಾರಂಭದ ಬಗ್ಗೆ ವಿರೋಧ ಪಕ್ಷಗಳು, ಅದರಲ್ಲೂ ವಿಶೇಷವಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅದರ ನಾಯಕ ಅರವಿಂದ್ ಕೇಜ್ರಿವಾಲ್ ಅವರ ನಿಲುವಿನ ಬಗ್ಗೆ ಕಿಡಿಕಾರಿದ ಓವೈಸಿ “ಈ ನಾಯಕರು ಬಹುಸಂಖ್ಯಾತ ಸಮುದಾಯವನ್ನು ಸಂತೋಷಪಡಿಸುವಲ್ಲಿ ನಿರತರಾಗಿದ್ದಾರೆ. ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡಲು ಆಗುತ್ತಿಲ್ಲ ಎಂದಿದ್ದಾರೆ.

ಇಂಡಿಯಾ ಮೈತ್ರಿಕೂಟದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ನಾವು ಪ್ರತಿ ಮಂಗಳವಾರ ಸುಂದರ್‌ಕಾಂಡ್ ಪಾಥ್ ಮತ್ತು ಹನುಮಾನ್ ಚಾಲೀಸಾವನ್ನು ಆಯೋಜಿಸುತ್ತೇವೆ ಎಂದು ಹೇಳಿದ್ದಾರೆ. ಯಾರೂ ಈ ಬಗ್ಗೆ ಏನನ್ನೂ ಮಾತನಾಡುವುದಿಲ್ಲ, ಏಕೆಂದರೆ ಅವರೆಲ್ಲರೂ ಬಹುಸಂಖ್ಯಾತ ಸಮುದಾಯದ ಮತಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರತರಾಗಿದ್ದಾರೆ ಎಂದು ಓವೈಸಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

“ಆರೆಸ್ಸೆಸ್‌ನ ಛೋಟಾ ರೀಚಾರ್ಜ್ ದೆಹಲಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸುಂದರ್‌ಕಾಂಡ್ ಪಥವನ್ನು ಆಯೋಜಿಸಲು ನಿರ್ಧರಿಸಿದೆ. ಜನವರಿ 22 ರಂದು ರಾಮ ಮಂದಿರದ ಉದ್ಘಾಟನೆ ಪ್ರಯುಕ್ತ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎಎಪಿ ವಿರುದ್ದ ಓವೈಸಿ ವಾಗ್ದಾಳಿ ನಡೆಸಿದ್ದಾರೆ.