
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಮಾತನಾಡಿದ ಯುವಕನೊಬ್ಬ ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಸುರತ್ಕಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಅನಿಲ್ ಕುಮಾರ್ (34 ವರ್ಷ) ಆರೋಪಿ. ಸರ್ಕಾರದ ಸವಲತ್ತು ಪಡೆಯಲು ಪಡಿತರ ಚೀಟಿಗೆ ತನ್ನ ಹೆಸರು ಸೇರಿಸಲು ಆತ ಯತ್ನಿಸಿದ್ದ. ಸರ್ವರ್ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಮೂರು ತಿಂಗಳ ಕಾಲ ಪ್ರಯತ್ನಿಸಿದ ಬಳಿಕವೂ ಪಡಿತರ ಚೀಟಿಗೆ ಹೆಸರು ಸೇರ್ಪಡೆ ಮಾಡಲು ಸಾಧ್ಯವಾಗದ ಕಾರಣ ಹತಾಶೆಗೊಳಗಾಗಿ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಮುಖ್ಯಮಂತ್ರಿಯವರ ಬಗ್ಗೆ ಆಕ್ಷೇಪಾರ್ಹ ಪದ ಬಳಸಿದ ಬಗ್ಗೆ ನಗರದ ಅತ್ತಾವರ ವೈದ್ಯನಾಥ ನಗರದ ಸುಹಾನ್ ಆಳ್ವ ಅವರು ದೂರು ನೀಡಿದ್ದರು. ಇದರ ಆಧಾರದಲ್ಲಿ ಆರೋಪಿ ವಿರುದ್ಧ ಭಿನ್ನ ಕೋಮುಗಳ ನಡುವೆ ವೈಷಮ್ಯ ಸೃಷ್ಟಿ, ಜನರನ್ನು ರೊಚ್ಚಿಗೆಬ್ಬಿಸಲು ಕುಮ್ಮಕ್ಕು ನೀಡಿರುವುದು ಹಾಗೂ ಉದ್ದೇಶಪೂರ್ವಕ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಅನಿಲ್ ಕುಮಾರ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A, 505(i)(c), 504ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
