
ಉಳ್ಳಾಲ : ‘ಮಂಡ್ಯದಲ್ಲಿ ದ್ವೇಷ ಭಾಷಣ ಮಾಡಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಡಿವೈಎಫ್‌ಐನವರ ಮೇಲೆ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಮತ್ತು ಪೊಲೀಸರ ಕ್ರಮ ಖಂಡಿಸಿ ಡಿವೈಎಫ್‌ಐನವರು ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿದರು. ಮಾಸ್ತಿಕಟ್ಟೆಯಿಂದ ಉಳ್ಳಾಲ ಪೊಲೀಸ್ ಠಾಣೆವರೆಗೆ ಮೆರವಣಿಗೆ ನಡೆಸಿ, ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರು ನ್ಯಾಯಯುತ ವಾಗಿ ಹೋರಾಟ ಮಾಡಿದ ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸುವ ಮೂಲಕ ಸವಾಲು ಎಸೆಯಲು ಪೊಲೀಸರು ತಯಾರಿದ್ದರೆ ಅದನ್ನು ಸ್ವೀಕರಿಸಿ ಪ್ರತಿ ಸವಾಲು ಹಾಕಲು ನಾವು ತಯಾರಿ ಇದ್ದೇವೆ ಎಂದು ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಎಚ್ಚರಿಸಿದ್ದಾರೆ.

ಹಿಂದೂ ಸಂಘಟನೆಗಳ ಮುಖಂಡರಾದ ಜಗದೀಶ್ ಕಾರಂತ್, ಶರಣ್ ಪಂಪ್ವೆಲ್ , ಪ್ರಭಾಕರ್ ಭಟ್ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಿದರೂ, ದ್ವೇಷ ಭಾಷಣ ಮಾಡಿದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳದ ಪೊಲೀಸರು ಬೀಡಿ ಕಾರ್ಮಿಕರ, ಬೀದಿಬದಿ ವ್ಯಾಪಾರಸ್ಥರ, ರೈತರ ಪರ ನ್ಯಾಯಕ್ಕಾಗಿ ಹೋರಾಟ ಮಾಡುವ ಡಿವೈಎಫ್ಐ ಮುಖಂಡರ ವಿರುದ್ಧ ಪ್ರಕರಣ ದಾಖಲಿಸುವ ಉದ್ದೇಶ ಏನು ಎಂದು ಪ್ರಶ್ನಿಸಿದರು.

ಸಂಘಟನೆಯ ಮುಖಂಡ ರಜಾಕ್ ಮೊಂಟೆಪದವು ಹಾಗೂ ಹೋರಾಟಗಾರರ ವಿರುದ್ಧ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಕಾರ್ಯಕರ್ತರು ಒಳನುಸುಳದಂತೆ ಪೊಲೀಸರು ಠಾಣೆಗೆ ಬೀಗ ಹಾಕಿದ್ದರು.