
ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದಲ್ಲಿ ಚಿನ್ನದ ಪಳ್ಳಿಯೂ ಆಗಲಿದೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದು, ಸಂಸದರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಇತರೆ ಕಾಂಗ್ರೆಸ್ ನಾಯಕರು ಏನು ಹೇಳಿದರು? ಇಲ್ಲಿದೆ ನೋಡಿ.

ಬೆಂಗಳೂರು, ಜ.13: ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದಲ್ಲಿ ಚಿನ್ನದ ಪಳ್ಳಿಯೂ ಆಗಲಿದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ನ (Ananth Kumar Hegde) ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಸಂಸದರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ (Dr.G.Parameshwar) ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪ್ರಕರಣ ದಾಖಲಿಸುವ ಬಗ್ಗೆ ನಾನೇನು ಪೊಲೀಸರಿಗೆ ಸೂಚನೆ ಕೊಟ್ಟಿಲ್ಲ. ಪೊಲೀಸರಿಗೆ ಅವರ ಕೆಲಸ ಏನು ಎಂದು ಗೊತ್ತಿದೆ, ಅವರು ಮಾಡುತ್ತಾರೆ. ಅನಂತಕುಮಾರ್ ವಿರುದ್ಧ ಕಾನೂನಿನಡಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕೇಂದ್ರದಲ್ಲಿ ಸಚಿವರಾಗಿದ್ದವರು ಜವಾಬ್ದಾರಿಯಿಂದ ಮಾತನಾಡಬೇಕು. ಯಾರೂ ಇಂತಹ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದರು.

ಶಾಂತಿ ಕದಡುವ ರೀತಿ ಮಾತಾಡುವುದು ಸರಿಯಾ ಎಂದು ನೀವೇ ಯೋಚಿಸಿ ಎಂದು ಪರಮೇಶ್ವರ್ ಕೇಳಿದರು. ಪ್ರಚೋದನೆಯಿಂದ ಅನಾಹುತ ನಡೆದರೆ ಯಾರು ಹೊಣೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾರು ಪ್ರೇರೇಪಿಸಿದ್ದಾರೋ ಗೊತ್ತಿಲ್ಲ, ರಾಮನೇ ಅವರಿಗೆ ಒಳ್ಳೆಯ ಮನಸ್ಸು ನೀಡಲಿ. ಏನಾದರೂ ಘಟನೆಗಳು ನಡೆದರೆ ಅನಂತಕುಮಾರ್ ಜವಾಬ್ದಾರಿ ಆಗುತ್ತಾರೆ. ಬೇರೆಯವರನ್ನು ಹೊಣೆ ಮಾಡಲ್ಲ ಎಂದರು.

ಕಳೆದ ಮೂರು ವರ್ಷಗಳಿಂದ ಅವರು ಏನು ಮಾತನಾಡಿರಲಿಲ್ಲ. ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಚುನಾವಣೆ ಬರುತ್ತಿದೆ. ಈಗ ಹೇಳಿಕೆ ಕೊಡುತ್ತಿದ್ದಾರೆ. ಅದರ ಬಗ್ಗೆ ನಮಗೆ ತಕರಾರಿಲ್ಲ. ಆದರೆ ಅವಹೇಳನಕಾರಿಯಾಗಿ ಮಾತನಾಡುವುದು, ಬೇರೆಯವರ ಬಗ್ಗೆ ನಿಂದಿಸಿ ಮಾತನಾಡುವುದು, ಅಸಂಬದ್ಧವಾಗಿ, ಪ್ರಚೋದಕಾರಿಯಾಗಿ ಮಾತನಾಡುವುದು ಇವೆಲ್ಲವನ್ನು ನಾವು ಸಹ ಗಮನಿಸುತ್ತಿದ್ದೇವೆ ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ವಿರುದ್ಧ ಏಕವಚನದಲ್ಲೇ ಅನಂತಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬಗ್ಗೆ, ಬೇರೆಯವರ ಬಗ್ಗೆ ಬಹಳ ಸುಲಭವಾಗಿ ಮಾತನಾಡಬಹುದು. ಅದು ಅವರವರ ಸಂಸ್ಕೃತಿ ತೋರಿಸುತ್ತದೆ, ಬೇರೇನೂ ತೋರಿಸಲ್ಲ ಎಂದರು.
ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನೋ ಪಾಲಟಿಕ್ಸ್, ಬ್ರ್ಯಾಂಡ್ ಬೆಂಗಳೂರು ವಿಚಾರ ಮಾತಾಡೋಣ ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಅನಂತಕುಮಾರ್ ವಾಗ್ದಾಳಿ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಎಂಬಿ ಪಾಟೀಲ್, ಚುನಾವಣೆಗೋಸ್ಕರ ಅನಂತಕುಮಾರ್ ಹೀಗೆ ಹೇಳಿಕೆ ನೀಡುತ್ತಿದ್ದಾರೆ. ನಾಲ್ಕು ವರ್ಷ ಅನಂತಕುಮಾರ್ ಹೆಗಡೆ ಎಲ್ಲಿ ಹೋಗಿದ್ದರು? ಕಾಣೆಯಾಗಿದ್ದರು. ಈಗ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಕಡೆ ಗಮನ ಹರಿಸುತ್ತಿದ್ದಾರೆ. ಜನರ ಕೈಗೆ ಇಷ್ಟು ದಿನ ಸಿಕ್ಕಿಲ್ಲ, ಈಗ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.
ಅನಂತಕುಮಾರ್ ಹೆಗಡೆಗೆ ಈ ರೀತಿಯಾಗಿ ಮಾತನಾಡುವ ಚಾಳಿ ಇದೆ. ಸಂವಿಧಾನ ಬದಲಾವಣೆಗೋಸ್ಕರ ಅಧಿಕಾರಕ್ಕೆ ಬಂದಿದ್ದೇವೆ ಅಂದಿದ್ದರು. ಮಸೀದಿಯನ್ನು ಧ್ವಂಸಗೊಳಿಸುತ್ತೇವೆ ಅಂದರೆ ಅವರು ಭ್ರಮೆಯಲ್ಲಿದ್ದಾರೆ. ಈ ರೀತಿಯ ಬೆಳವಣಿಗೆಗಳಿಗೆ ನಮ್ಮ ಸರ್ಕಾರ ಅವಕಾಶ ಕೊಡುವುದಿಲ್ಲ. ದೇವಸ್ಥಾನ, ಚರ್ಚ್, ಮಸೀದಿಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಕಾನೂನು ಕೈಗೆ ತೆಗೆದುಕೊಂಡು ನಿರ್ನಾಮ ಮಾಡುತ್ತೇನೆ ಅಂದರೆ ನಡೆಯಲ್ಲ. ಕೀಳುಮಟ್ಟದ ವ್ಯವಸ್ಥೆಗೆ ಹೆಗಡೆ ಇಳಿದಿದ್ದಾರೆ ಎಂದರು.