
ಹೈಲೈಟ್ಸ್:
- ಗುಜರಾತ್ ಕೋಮು ಹಿಂಸಾಚಾರದ ವೇಳೆಯಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ ಅತ್ಯಾಚಾರವೆಸಗಿ, ಅವರ ಮಕ್ಕಳನ್ನು ಕುಟುಂಬವನ್ನು ಜೀವಂತವಾಗಿ ಸುಟ್ಟು ಕೊಂದ 11 ಅಪರಾಧಿಗಳು ನಾಪತ್ತೆ
- ಅಪರಾಧಿಗಳಿಗೆ ಗುಜರಾತ್ ಸರಕಾರ ನೀಡಿದ್ದ ಕ್ಷಮಾದಾನವನ್ನು ಸೋಮವಾರ ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್
- ಅಪರಾಧಿಗಳನ್ನು ಇನ್ನೆರಡು ವಾರಗಳಲ್ಲಿ ಮತ್ತೆ ಜೈಲಿಗೆ ದೂಡಬೇಕು ಎಂದು ತೀರ್ಪು ನೀಡಿದ್ದ ನ್ಯಾಯಾಲಯ
- ಬೆನ್ನಲ್ಲೇ ಪ್ರಕರಣದ ಅಪರಾಧಿಗಳು ನಾಪತ್ತೆ, 11ರಲ್ಲಿ 9 ಅಪರಾಧಿಗಳ ಮನೆಗಳಿಗೆ ಬೀಗ
- ಅಪರಾಧಿಗಳ ಮುಚ್ಚಿದ ಮನೆಯ ಬಾಗಿಲುಗಳ ಮುಂದೆ ಕಾವಲು ಕಾಯುತ್ತಿದ್ದಾರೆ ಪೊಲೀಸ್ ಪೇದೆಗಳು
ಹೊಸದಿಲ್ಲಿ: ಗೋಧ್ರೋತ್ತರ ಗಲಭೆ ವೇಳೆಯಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ ಅತ್ಯಾಚಾರವೆಸಗಿದ್ದ ಅವರ ಮಕ್ಕಳನ್ನು ಕುಟುಂಬವನ್ನು ಜೀವಂತವಾಗಿ ಸುಟ್ಟು ಕೊಂದ 11 ಅಪರಾಧಿಗಳಿಗೆ ಗುಜರಾತ್ ಸರಕಾರ ನೀಡಿದ್ದ ಕ್ಷಮಾದಾನವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿ ಅಪರಾಧಿಗಳನ್ನು ಇನ್ನೆರಡು ವಾರಗಳಲ್ಲಿ ಮತ್ತೆ ಜೈಲಿಗೆ ದೂಡಬೇಕು ಎಂದು ತೀರ್ಪು ನೀಡಿದೆ. ಇದೀಗ ಅಪರಾಧಿಗಳು ಎಲ್ಲಿ ಹೋದರು, ಗುಜರಾತ್ ಸರಕಾರದ ಬೆಂಬಲ ಇರುವ ಇವರು ಹೇಗೆ ನಾಪತ್ತೆ ಯಾದರು ಎನ್ನುವ ಪ್ರಶ್ನೆ ಎದ್ದು ನಿಂತಿದೆ.

11 ಮಂದಿ ಪೈಕಿ ಒಂಬತ್ತು ಮಂದಿ ಅಪರಾಧಿಗಳು ವಾಸಿಸುತ್ತಿದ್ದ ಗುಜರಾತ್ನ ದೋಹದ್ ಜಿಲ್ಲೆಯ ರಣಧಿಕ್ಪುರ್ ಮತ್ತು ಸಿಂಗ್ವಾಡ್ ಅವಳಿ ಗ್ರಾಮಗಳಲ್ಲಿ ಅವರ ಮನೆಗಳಿಗೆ ಬೀಗ ಹಾಕಲಾಗಿದೆ. ಅಲ್ಲಿಗೆ ತೆರಳಿದರೆ ಬಾಗಿಲು ಮುಚ್ಚಿರುವ ಅಪರಾಧಿಗಳ ಮನೆಗಳು ಮತ್ತು ಭದ್ರತೆಗೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿ ನಮ್ಮನ್ನು ಸ್ವಾಗತಿಸುತ್ತಿದ್ದಾರೆ ಎಂದು ಸುದ್ದಿವಾಹಿನಿಯೊಂದು ತಿಳಿಸಿದೆ. ಎಲ್ಲಿ ಅವರು ಎಂದು ಕೇಳಿದರೆ ಸಂಬಂಧಿಕರು ಬಾಯಿ ಬಿಡುತ್ತಿಲ್ಲ.
“ಅಪರಾಧಿಗಳಲ್ಲಿ ಒಬ್ಬನಾದ ಗೋವಿಂದ್ ನಾಯ್ (55)ನ ತಂದೆ ಅಖಂಭಾಯ್ ಚತುರ್ಭಾಯಿ ರಾವಲ್ (87) ಪ್ರಕಾರ . ಆತ ಮನೆ ಬಿಟ್ಟು ಒಂದು ವಾರ ಕಳೆಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾನೆ.

ಆದರೆ, ಜೈಲಿಗೆ ಹಿಂತಿರುಗುವುದು ದೊಡ್ಡ ವಿಷಯವಲ್ಲ. ಅವರು 20 ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಇದು ಹೊಸದೇನಲ್ಲ,” ಎಂದು ಅಖಂಭಾಯ್ ಹೇಳಿದ್ದಾನೆ
ಅವನು ಎಲ್ಲಿ ಹೋದ ಎಂಬುದು ನಮಗೆ ತಿಳಿಯದು ಎಂದು ರಾಧೇಶ್ಯಾಮ್ನ ತಂದೆ ಭಗವಾನ್ದಾಸ್ ಶಾ ನುಡಿದಿದ್ದಾರೆ. ಆದರೆ, ರಾಧೇಶ್ಯಾಮ್ ಸೇರಿದಂತೆ ಬಹುತೇಕ ಎಲ್ಲಾ ಅಪರಾಧಿಗಳು ಭಾನುವಾರದವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಕರಣದ ಮತ್ತೊಬ್ಬ ಅಪರಾಧಿ ಪ್ರದೀಪ್ ಮೋಧಿಯಾ (57)ನ ಮನೆಗೆ ಕೂಡ ಬೀಗ ಹಾಕಲಾಗಿತ್ತು. ”ಪ್ರದೀಪ್ ಸೋಮವಾರ ಮುಂಜಾನೆ ಮನೆಯಿಂದ ಹೊರ ಹೋಗಿದ್ದಾನೆ. ಆತನ ಬೈಕ್ ಮನೆ ಬಳಿಯೇ ಇದೆ. ಆದ್ದರಿಂದ ವಾಪಸ್ ಬರಬಹುದು,” ಎಂದು ಮನೆ ಬಳಿ ನಿಯೋಜಿಸಿದ್ದ ಸಬ್ ಇನ್ಸ್ಪೆಕ್ಟರ್ ಆರ್ ಎನ್ ದಾಮೋರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ 16 ತಿಂಗಳಿನಿಂದ ಅಪರಾಧಿಗಳು ಮನೆಯಲ್ಲೇ ಇದ್ದರು ಎಂದು ಅವರು ಹೇಳಿದ್ದಾರೆ.

ತೀರ್ಪಿನಿಂದ ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ಎಲ್ಲರೂ ವಾಪಸ್ ಬರುತ್ತಾರೆ ಎಂದು ಅಂಗಡಿ ಮಾಲೀಕರೊಬ್ಬರು ವಾಹಿನಿಗೆ ತಿಳಿಸಿದ್ದಾರೆ. ಈಗ ಮುಕ್ತಿಗೊಳಿಸಿದವರನ್ನು ಮತ್ತೆ ಜೈಲಿಗೆ ಸೇರಿಸುವುದು ಗುಜರಾತ್ ಸರಕಾರದ ಹೊಣೆಯಾಗಿದೆ.
ನಾನೀಗ ಮತ್ತೆ ಉಸಿರಾಡಬಹುದು
“ಪರ್ವತದಷ್ಟು ದೊಡ್ಡದಾದ ಕಲ್ಲೊಂದನ್ನು ನನ್ನ ಎದೆಯ ಮೇಲಿಂದ ತೆಗೆದು ಪಕ್ಕಕ್ಕೆ ಇರಿಸಿದಂತಾಯ್ತು. ನಾನೀಗ ಮತ್ತೆ ಉಸಿರಾಡಬಹುದು. ನಿರಾಳ ಭಾವದಿಂದ ಕಣ್ಣೀರು ಹಾಕಿದೆ. ಒಂದೂವರೆ ವರ್ಷಗಳ ನಂತರ ಮೊದಲ ಬಾರಿ ಮಂದಸ್ಮಿತಳಾದೆ. ನನ್ನ ಮಕ್ಕಳನ್ನು ತಬ್ಬಿಕೊಂಡೆ. ಖಂಡಿತ ಈ ಸೋಮವಾರ ನನ್ನ ಪಾಲಿಗೆ ಹೊಸ ವರ್ಷ. ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ಗೆ ನಾನು ಧನ್ಯವಾದ ತಿಳಿಸುವೆ. ಈ ತೀರ್ಪು ಎಲ್ಲರಿಗೂ ಸಮಾನ ನ್ಯಾಯದ ಭರವಸೆಯನ್ನು ನೀಡುತ್ತದೆ,” ಇದು ಬಿಲ್ಕಿಸ್ ಬಾನೊ ಅವರ ಒಡಲಾಳದ ನುಡಿ. ಇಷ್ಟು ದಿನ ಅಜ್ಞಾತ ಸ್ಥಳದಲ್ಲಿದ್ದ ಅವರ ಕುಟುಂಬವೀಗ ಕೊಂಚ ಬೆಳಕಿಗೆ ಬಂದಿದೆ. ಸುಪ್ರೀಂ ಕೋರ್ಟ್ ತೀರ್ಪು ಈ ಕುಟುಂಬಕ್ಕೆ ನೆಮ್ಮದಿ ನೀಡಿದೆ.