
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಯೋಧ್ಯೆಯ ರಾಮ ಮಂದಿರಕ್ಕೆ ಮುಸ್ಲಿಮರ ಹೆಸರಿನಲ್ಲಿ ಬಾಂಬ್ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಬುಧವಾರ ಬಂಧಿಸಿದೆ.
ಎಸ್ಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಅಮಿತಾಭ್ ಯಶ್ ಮತ್ತು ದೇವೇಂದ್ರ ತಿವಾರಿ ಎಂಬ ವ್ಯಕ್ತಿಗೂ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ವಿಶೇಷ ಕಾರ್ಯಪಡೆ, ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಎಂಬ ಇಬ್ಬರನ್ನು ಬಂಧಿಸಿದೆ.

ಇಬ್ಬರು ಆರೋಪಿಗಳು @iDevendraOffice ಎಂಬ ಎಕ್ಸ್ ಹ್ಯಾಂಡಲ್ ಬಳಸಿ ಸಿಎಂ ಯೋಗಿ ಆದಿತ್ಯನಾಥ್, ಎಸ್ಟಿಎಫ್ ಮುಖ್ಯಸ್ಥ ಅಮಿತಾಬ್ ಯಶ್ ಮತ್ತು ಅಯೋಧ್ಯೆಯ ರಾಮಮಂದಿರಕ್ಕೆ ಬೆದರಿಕೆ ಹಾಕಿದ್ದರು.
ಅಲ್ಲದೆ, ಬೆದರಿಕೆ ಸಂದೇಶಗಳನ್ನು ಕಳುಹಿಸಲು ಆರೋಪಿಗಳು ‘alamansarikhan608@gmail.com’ಮತ್ತು ‘zubairkhanisi199@gmail.com’ಎಂಬ ಮುಸ್ಲಿಂ ಹೆಸರಿನ ಎರಡು ಇ-ಮೇಲ್ ಐಡಿಗಳನ್ನು ಬಳಸಿದ್ದರು ಎಂದು ತನಿಖೆಯ ಆರಂಭದಲ್ಲಿ ತಿಳಿದು ಬಂದಿತ್ತು.

ತಾಂತ್ರಿಕ ವಿಶ್ಲೇಷಣೆ ಮೂಲಕ ಇ-ಮೇಲ್ ಜಾಡು ಹಿಡಿದು ಹೊರಟ ವಿಶೇಷ ಕಾರ್ಯಪಡೆ ಆರೋಪಿಗಳನ್ನು ಪತ್ತೆ ಹಚ್ಚಿದೆ. ಆರೋಪಿಗಳು VivoT-2 ಮತ್ತು Samsung GalaxyA-3 ಮೊಬೈಲ್ ಫೋನ್ಗಳನ್ನು ಬಳಸಿಕೊಂಡು ಇ-ಮೇಲ್ ಐಡಿ ರಚಿಸಿದ್ದರು. ಆರೋಪಿಗಳು ಇ-ಮೇಲ್ಗಳನ್ನು ಕಳುಹಿಸಿದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳು, ವೈ-ಫೈ ರೂಟರ್ ಮತ್ತು ಡಿವಿಆರ್ (ಡಿಜಿಟಲ್ ವಿಡಿಯೋ ರೆಕಾರ್ಡರ್) ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಎಸ್ಟಿಎಫ್ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಶ್ ಕುಮಾರ್ ಶುಕ್ಲಾ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ.

ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೋ ಸೇವಾ ಪರಿಷತ್ ಎಂಬ ಹೆಸರಿನಲ್ಲಿ ಎನ್ಜಿಒಗಳನ್ನು ನಡೆಸುತ್ತಿರುವ ದೇವೇಂದ್ರ ತಿವಾರಿ ಎಂಬಾತನ ಸೂಚನೆಯಂತೆ ತಾವು ಕಾರ್ಯ ನಿರ್ವಹಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪ್ರಮೇಶ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.
ಆರೋಪಿಗಳ ಪೈಕಿ ತಹರ್ ಸಿಂಗ್ ಸಾಮಾಜಿಕ ಮಾಧ್ಯಮ ನಿರ್ವಹಣೆ ಮಾಡುತ್ತಿದ್ದ. ಮತ್ತೋರ್ವ ಓ ಪ್ರಕಾಶ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ನಲ್ಲಿ ಡಿಪ್ಲೋಮಾ ಅಧ್ಯಯನ ಮಾಡುತ್ತಿದ್ದ. ಇದೇ ಕಾಲೇಜಿನಲ್ಲಿ ದೇವೇಂದ್ರ ತಿವಾರಿ ಉದ್ಯೋಗಿಯಾಗಿದ್ದ.
ನಕಲಿ ಇ-ಮೇಲ್ ಐಡಿಗಳನ್ನು ಸೃಷ್ಟಿಸಲು ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸಲು ತಿವಾರಿ ಇಬ್ಬರು ಬಂಧಿತರಿಗೆ ಸೂಚನೆ ನೀಡಿದ್ದ ಎಂದು ಹೇಳಲಾಗಿದೆ. ಇ-ಮೇಲ್ ಮೂಲಕ ಬೆದರಿಕೆ ಸಂದೇಶದ ಕಳುಹಿಸಿದ ನಂತರ ಮಾಧ್ಯಮಗಳು ಮತ್ತು ರಾಜಕೀಯದ ಗಮನ ಸೆಳೆಯಲು ಎಕ್ಸ್ ಖಾತೆಯ ಮೂಲಕ ಬೆದರಿಕೆಯ ಸಂದೇಶವನ್ನು ಪ್ರಚಾರ ಮಾಡಿದ್ದರು ಎಂದು ವರದಿಗಳು ಹೇಳಿವೆ.
ಇ-ಮೇಲ್ಗಳನ್ನು ಕಳುಹಿಸಲು ಬಳಸಿದ್ದ ಮೊಬೈಲ್ ಫೋನ್ಗಳನ್ನು ತಿವಾರಿ ಆದೇಶದ ಮೇರೆಗೆ ನಾಶಪಡಿಸಲಾಗಿದೆ. ಕೃತ್ಯದ ಸಮಯದಲ್ಲಿ ಇಂಟರ್ನೆಟ್ಗಾಗಿ ಆರೋಪಿಗಳು ಕಚೇರಿಯ ವೈ-ಫೈ ಬಳಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.