
ಚಿತ್ರದುರ್ಗದ ಚಳ್ಳಕೆರೆ ಗೇಟ್ ಸಮೀಪದ ಪಾಳು ಬಿದ್ದ ಮನೆಯೊಂದರಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ರಾತ್ರಿ ವೇಳೆಗೆ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವಗಳಿವೆ ಎಂಬ ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಮತ್ತು ವಿಧಿ ವಿಜ್ಞಾನ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಈ ವೇಳೆ ಮನೆಯಲ್ಲಿ ಐದು ಅಸ್ತಿಪಂಜರಗಳು ಮತ್ತು ತಲೆಬುರುಡೆಗಳು ಪತ್ತೆಯಾಗಿದೆ. ನಾಲ್ಕು ಅಥವಾ ಐದು ಜನ ಮೃತಪಟ್ಟಿರುವ ಬಗ್ಗೆ ಪೊಲೀಶರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಐಜಿಪಿ ತ್ಯಾಗರಾಜನ್, ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಎಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಅನಿಲ್ ಕುಮಾರ್, ಸಿಪಿಐ ನಯಿಂ ಸೇರಿದಂತೆ ಪೊಲೀಸರು ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ.
ಜಗನ್ನಾಥ ರೆಡ್ಡಿ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿ ಮೃತಪಟ್ಟಿರುವ ದೇಹಗಳು ಯಾರದು ಎನ್ನುವ ಖಚಿತ ಮಾಹಿತಿ ಇಲ್ಲ. ಕಳೆದ ಕೆಲ ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎನ್ನಲಾಗಿದೆ.

ನಾಲ್ಕು ವರ್ಷಗಳಿಂದ ಮನೆಯ ಬಾಗಿಲು ತೆರೆದಿಲ್ಲ!
ನಿವೃತ್ತ ಎಂಜಿನಿಯರ್ ಜಗನ್ನಾಥ ರೆಡ್ಡಿ (70), ಪತ್ನಿ ಪ್ರೇಮಾವತಿ (60), ಮಗಳು ತ್ರಿವೇಣಿ (42), ಮಗ ಪುತ್ರರಾದ ಕೃಷ್ಣಾ ರೆಡ್ಡಿ (40) ಹಾಗೂ ನರೇಂದ್ರ ರೆಡ್ಡಿ (38) ಅವರು ಈ ಮನೆಯಲ್ಲಿ ವಾಸವಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಮನೆಯ ಬಾಗಿಲು ತೆರೆದಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ದೊಡ್ಡಸಿದ್ದವ್ವನಹಳ್ಳಿ ಮೂಲದ ಜಗನ್ನಾಥ ರೆಡ್ಡಿ ಅವರಿಗೆ ಮೂವರು ಗಂಡು ಮಕ್ಕಳು, ಓರ್ವ ಪುತ್ರಿ ಇದ್ದರು. ಅವರಲ್ಲಿ ಯಾರಿಗೂ ಮದುವೆ ಆಗಿರಲಿಲ್ಲ. ಹಿರಿಯ ಮಗ ಮಂಜುನಾಥ ರೆಡ್ಡಿ ಎಂಬುವವರು ಮೊದಲೇ ಮೃತಪಟ್ಟಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಅಕ್ಕಪಕ್ಕದ ಮನೆಯವರು 3 ವರ್ಷಗಳ ಮೊದಲು ಮನೆಯಿಂದ ವಾಸನೆ ಬರುತ್ತಿತ್ತು. ಆಗ ಇಲಿ ಸತ್ತಿರಬಹುದು ಎಂದು ಭಾವಿಸಲಾಗಿತ್ತು. ಕೆಲ ದಿನ ವಾಸನೆ ಬಂದು ನಿಂತಿತ್ತು. ಆ ನಂತರ ಯಾರೂ ಆ ಮನೆಯ ಕಡೆಗೆ ಗಮನ ಹರಿಸಿರಲಿಲ್ಲ ಎಂದು ಹೇಳಿದ್ದಾರೆ.

ಮನೆಯ ಮಾಲೀಕರಾದ ಜಗನ್ನಾಥ ರೆಡ್ಡಿ ಅವರ ಸಂಬಂಧಿಕ ಪವನ್ ಕುಮಾರ್ ಅವರು ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಇಲ್ಲಿ ಪತ್ತೆಯಾಗಿರುವ ಅಸ್ಥಿ ಪಂಜರಗಳು ಜಗನ್ನಾಥ ರೆಡ್ಡಿ ಮತ್ತು ಕಟುಂಬದ್ದ ಅನುಮಾನವೂ ಇದೆ. 3 ವರ್ಷಗಳ ಹಿಂದೆ ಮೃತಪಟ್ಟರುವ ಶಂಕೆ ಕಾಣಿಸುತ್ತಿದೆ. ಈ ಸಾವಿನ ಬಗ್ಗೆ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಘಟನೆ ನಡೆದ ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮನೆಯ ಸುತ್ತಮುತ್ತ ಬ್ಯಾರಿಕೇಡ್ ಹಾಕಿ, ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ.
ಪೊಲೀಸರ ತನಿಖೆ ವೇಳೆ ಈ ಮನೆಯಲ್ಲಿ 2019ರ ಕ್ಯಾಲೆಂಡರ್ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗೆಯೇ ಆ ಮನೆಯ ಸದಸ್ಯರಲ್ಲಿ ಬಾಬುರೆಡ್ಡಿ ಅನ್ನೋರು ಮಾತ್ರ ಜನಸಂಪರ್ಕದಲ್ಲಿದ್ದು, ಉಳಿದವರು ಯಾರು ಸಹ ಹೊರ ಬರುತ್ತಿರಲಿಲ್ಲ. ಹೀಗಾಗಿ ನಗರದಲ್ಲಿ ಭಾರಿ ಆತಂಕ ಮನೆ ಮಾಡಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.