
ಅಂತೂ ಬಹಳ ಸಮಯದಿಂದ ನನೆಗುದಿಗೆ ಬಿದ್ದಿದ್ದ ಜಿಪಂ ಮತ್ತು ತಾಪಂ ಚುನಾವಣೆ ಹಾದಿ ಇದೀಗ ಸುಗಮಗೊಂಡಿದೆ. ರಾಜ್ಯದ 30 ಜಿಲ್ಲೆಗಳ ಜಿಪಂ ಮತ್ತು ತಾಪಂಗಳ ಕ್ಷೇತ್ರ ಮರುವಿಂಗಡಣೆ ಮತ್ತು ಪ್ರವರ್ಗವಾರು ಮೀಸಲು ಕೊನೆಗೂ ಅಂತಿಮಗೊಂಡಿದ್ದು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸನ್ನು ಸರ್ಕಾರ ಅಂಗೀಕರಿಸಿದೆ. ಆದರೆ ಕ್ಷೇತ್ರವಾರು ಮೀಸಲು ಪ್ರಕ್ರಿಯೆ ಮಾತ್ರ ಇನ್ನೂ ಬಾಕಿ ಉಳಿದಿದೆ. ಅದಾದ ಬಳಿಕ ಚುನಾವಣೆ ದಿನಾಂಕ ಪ್ರಕಟ ಆಗಲಿದೆ.

ಹೈಲೈಟ್ಸ್:
- ಎರಡೂವರೆ ವರ್ಷಗಳ ಹಿಂದೆಯೇ ನಡೆಯಬೇಕಿದ್ದ ಜಿಪಂ ಮತ್ತು ತಾಪಂ ಚುನಾವಣೆ
- ಕೋವಿಡ್ ಬೆನ್ನಲ್ಲೇ ಮೀಸಲು ನಿಗದಿ, ಕ್ಷೇತ್ರ ಮರುವಿಂಗಡಣೆಯೇ ತೊಡಕಾಗಿತ್ತು
- ಇದೀಗ ಜಿಪಂ, ತಾಪಂ ಕ್ಷೇತ್ರ ಮರುವಿಂಗಡಣೆ, ಪ್ರವರ್ಗವಾರು ಮೀಸಲು ಪ್ರಕಟ
- ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸಿಗೆ ಸರ್ಕಾರ ಅಸ್ತು
ಬೆಂಗಳೂರು: ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಕ್ಷೇತ್ರ ಮರುವಿಂಗಡಣೆ ಹಾಗೂ ಪ್ರವರ್ಗವಾರು ಮೀಸಲು ಕೊನೆಗೂ ಅಂತಿಮಗೊಂಡಿದೆ. ಈ ಸಂಬಂಧ ಕರ್ನಾಟಕ ಪಂಚಾಯತ್ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸನ್ನು ಸರಕಾರ ಅಂಗೀಕರಿಸಿದ್ದು, ಕೊಡಗು ಜಿಲ್ಲೆ ಹೊರತುಪಡಿಸಿ ಇತರ 30 ಜಿಲ್ಲಾ ಪಂಚಾಯತಿಗಳಿಗೆ ಒಟ್ಟು 1,101 ಸದಸ್ಯರು ಹಾಗೂ 234 ತಾಲೂಕು ಪಂಚಾಯಿತಿಗಳಿಗೆ 3,621 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಅಧಿಸೂಚನೆ ಹೊರಡಿಸಿದೆ.

ಕ್ಷೇತ್ರ ಪುನರ್ ವಿಂಗಡಣೆ, ಮೀಸಲು ನಿಗದಿ ಸಮಸ್ಯೆ ಮತ್ತಿತರ ಕಾರಣಕ್ಕೆ ಸುಮಾರು ಎರಡೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಹಾದಿ ಈ ಮೂಲಕ ಭಾಗಶಃ ಸುಸೂತ್ರವಾಗಿದೆ. ಸದಸ್ಯರ ಸಂಖ್ಯೆ ನಿರ್ಣಯಿಸುವ ಜತೆಗೆ ಪ್ರವರ್ಗವಾರು ಶೇ 33 ಹಾಗೂ ಶೇ 50 ಮಹಿಳಾ ಮೀಸಲು ನಿಗದಿಪಡಿಸಲಾಗಿದೆ. ಈ ಸಂಬಂಧ ಡಿಸೆಂಬರ್ 16 ರಂದು ಸರಕಾರ ಅಧಿಸೂಚನೆ ಹೊರಡಿಸಿದೆ. ಕ್ಷೇತ್ರವಾರು ಮೀಸಲು ನಿಗದಿ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದೆ.
ಜಿಪಂಗಳಿಗೆ 1,126 ಸದಸ್ಯರು
ರಾಜ್ಯದ 31 ಜಿಲ್ಲಾ ಪಂಚಾಯ್ತಿಗಳಿಗೆ ಒಟ್ಟು 1,126 ಸದಸ್ಯರ ಸಂಖ್ಯೆ ನಿರ್ಧರಿಸಿ ಸೀಮಾ ಆಯೋಗ ಶಿಫಾರಸು ಮಾಡಿತ್ತು. ಈ ಪೈಕಿ ಕೋರ್ಟ್ ಪ್ರಕರಣ ಬಾಕಿ ಇರುವ ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದಂತೆ 30 ಜಿ.ಪಂಗಳಿಗೆ ಚುನಾಯಿತರಾಗಬೇಕಿರುವ 1,101 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲಾಗಿದೆ. ಅಂತೆಯೇ, ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದಂತೆ 234 ತಾಲೂಕು ಪಂಚಾಯಿತಿಗಳಿಗೆ 3,621 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಲಾಗಿದೆ.
ಪ್ರತಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳಿಗೆ ನಿಗದಿಪಡಿಸಲಾದ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಶೇಕಡಾ 50 ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಪ್ರವರ್ಗ – ‘ಅ’ ಮತ್ತು ‘ಬ’ ಮೀಸಲಿರಿಸಲಾಗಿದೆ. ಉಳಿದ ಅರ್ಧದಷ್ಟು ಸ್ಥಾನಗಳು ಸಾಮಾನ್ಯ ವರ್ಗದ ಸ್ಥಾನಗಳೆಂದು ಪರಿಗಣಿಸಲಾಗಿದೆ. ಪ್ರತಿ ಪ್ರವರ್ಗದಲ್ಲಿ ಮಹಿಳೆಯರಿಗೆ ಶೇ.50 ಮೀಸಲು ನಿಗದಿಪಡಿಸಲಾಗಿದೆ.
ದೀರ್ಘ ಕಸರತ್ತು
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಳಿಗೆ ಎರಡೂವರೆ ವರ್ಷಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಕೋವಿಡ್ ಸಾಂಕ್ರಾಮಿಕದ ಬೆನ್ನಲ್ಲೇ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲು ಸಮಸ್ಯೆ ಚುನಾವಣೆಗೆ ತೊಡಕಾಗಿತ್ತು. 2021ರ ಆರಂಭದಲ್ಲಿ ರಾಜ್ಯ ಚುನಾವಣಾ ಆಯೋಗ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲು ನಿಗದಿ ಮಾಡಿ ಮತದಾರರ ಕರಡು ಪಟ್ಟಿಯನ್ನೂ ಪ್ರಕಟಿಸಿತ್ತು. ಆದರೆ ಕ್ಷೇತ್ರ ಮರುವಿಂಗಡಣೆ ಬೇಕಾಬಿಟ್ಟಿ ನಡೆದಿದೆ ಎಂದು ವ್ಯಾಪಕ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993’ ಕ್ಕೆ ತಿದ್ದುಪಡಿ ತಂದು ‘ಕರ್ನಾಟಕ ಪಂಚಾಯಿತಿ ರಾಜ್ ಸೀಮಾ ನಿಯಂತ್ರಣ ಆಯೋಗ’ವನ್ನು ರಚಿಸಿತ್ತು.
ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀ ನಾರಾಯಣ ನೇತೃತ್ವದ ಆಯೋಗವು ಜಿಪಂ ಮತ್ತು ತಾಪಂಗಳಿಗೆ ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ, ಪ್ರವರ್ಗವಾರು ಮೀಸಲು ನಿಗದಿಪಡಿಸಿ ಸರಕಾರಕ್ಕೆ ಶಿಫಾರಸು ಮಾಡಿತ್ತು. ಮತ್ತೊಬ್ಬ ಐಎಎಸ್ ಅಧಿಕಾರಿ ಎಂ.ಆರ್.ಕಾಂಬ್ಳೆ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿದ ಬಳಿಕ ಈ ಶಿಫಾರಸುಗಳನ್ನು ಸರಕಾರ ಒಪ್ಪಿ ಅಧಿಸೂಚನೆ ಹೊರಡಿಸಿದೆ.