
LPG Cylinder Subsidy E KYC Rumor : ರಾಜ್ಯಾದ್ಯಂತ ಸದ್ಯ ಪ್ರಧಾನಿ ಮೋದಿ ಎಲ್ಪಿಸಿ ಸಿಲಿಂಡರ್ ಸಬ್ಸಿಡಿ ಕೊಡುತ್ತಾರೆ ಎಂಬ ವದಂತಿ ಜೋರಿದೆ. ಈ ಹಿನ್ನೆಲೆ ಗ್ಯಾಸ್ ಏಜೆನ್ಸಿಗಳ ಮುಂದೆ ಇ ಕೆವೈಸಿ ಮಾಡಿಸಲು ಸಾಕಷ್ಟು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕರಾವಳಿ ಜಿಲ್ಲೆಗಳು, ಉತ್ತರ ಕರ್ನಾಟಕ ಹಾಗೂ ಗಡಿ ಜಿಲ್ಲೆಗಳಲ್ಲಿಯೂ ಈ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ವಿವರ ಇಲ್ಲಿದೆ.

ಹೈಲೈಟ್ಸ್:
- ಗ್ಯಾಸ್ ಸಂಪರ್ಕವುಳ್ಳವರು ಇ ಕೆವೈಸಿ ಮಾಡಿಸಿದರೆ ಜನವರಿ 1 ರಿಂದ ಸಹಾಯಧನ ಸಿಗಲಿದೆ ಎಂಬ ವದಂತಿ ಜೋರು.
- ಇ ಕೆವೈಸಿ ಮಾಡಿಸದಿದ್ದರೆ ವಾಣಿಜ್ಯ ದರದಲ್ಲಿ 1,400 ರೂ.ಗಳಿಗೆ ಸಿಲಿಂಡರ್ ಪಡೆದುಕೊಳ್ಳಬೇಕಾದೀತು ಎಂಬ ಸುಳ್ಳು ಮಾಹಿತಿ.
- ಗ್ಯಾಸ್ ಏಜೆನ್ಸಿಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಂತು ಶೀಘ್ರ ಇ ಕೆವೈಸಿಗೆ ಪರದಾಟ.
ಉಡುಪಿ: ಗ್ಯಾಸ್ ಸಂಪರ್ಕವುಳ್ಳವರು ಇ ಕೆವೈಸಿ ಮಾಡಿಸಿದರೆ ಜನವರಿ 1 ರಿಂದ ಸಹಾಯಧನ ಸಿಗಲಿದೆ, ಇ ಕೆವೈಸಿ ಮಾಡಿಸದಿದ್ದರೆ ವಾಣಿಜ್ಯ ದರದಲ್ಲಿ 1,400 ರೂ.ಗಳಿಗೆ ಸಿಲಿಂಡರ್ ಪಡೆದುಕೊಳ್ಳಬೇಕಾದೀತು ! – ಹೀಗೊಂದು ಸುಳ್ಳು ಸಂದೇಶ ಮೊಬೈಲ್ ಜಾಲತಾಣದಲ್ಲಿ ಕಳೆದೊಂದು ವಾರದಲ್ಲಿ ಸಿಕ್ಕಾಪಟ್ಟೆ ಹರಿದಾಡಿದ್ದು, ಗೊಂದಲಕ್ಕೊಳಗಾದ ಜನರು ಗ್ಯಾಸ್ ಏಜೆನ್ಸಿಗಳ ಮುಂದೆ ಸರದಿಯಲ್ಲಿದ್ದಾರೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಇತ್ತೀಚೆಗೆ ಎಲ್ಲತೈಲ ಕಂಪನಿಗಳು ಪಿಎಂಯುವೈ (ಪ್ರಧಾನ ಮಂತ್ರಿ ಉಜ್ವಲ ಯೋಜನಾ) ಆದ್ಯತೆಯೊಂದಿಗೆ ಪಹಲ್ (ಆಧಾರ್ ಒದಗಿಸಿದ) ಫಲಾನುಭವಿಗಳಿಂದ ಬಯೋಮೆಟ್ರಿಕ್ ಪಡೆದುಕೊಳ್ಳುವಂತೆ ಸೂಚಿಸಿದೆ.
ಆದರೆ, ಈ ನಿಟ್ಟಿನಲ್ಲಿ ಯಾವುದೇ ಅಂತಿಮ ದಿನಾಂಕವಾಗಲಿ, ಸಹಾಯಧನವಾಗಲಿ, ಇ ಕೆವೈಸಿ ಮಾಡಿಸದಿದ್ದರೇನು ಎನ್ನುವ ಯಾವುದೇ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಇಲಾಖೆ ಅಥವಾ ತೈಲ ಕಂಪನಿಗಳು ನೀಡಿಲ್ಲ. ಆದರೆ, ಡಿ.31ರ ಅಂತಿಮ ದಿನ, ಸಹಾಯಧನ ಇಷ್ಟಿದೆ, ಇ ಕೆವೈಸಿ ಮಾಡದಿದ್ದರೆ ವಾಣಿಜ್ಯ ದರದಲ್ಲಿ ಸಿಲಿಂಡರ್ ಪಡೆಯಬೇಕಾದೀತೆನ್ನುವ ತಪ್ಪು ಮಾಹಿತಿಯನ್ನು ಕಿಡಿಗೇಡಿಗಳು ರವಾನಿಸಿದ್ದಾರೆ.
ಸದ್ಯ ಯಾರಿಗಷ್ಟೇ ಸಹಾಯಧನ ಬರುತ್ತೆ?
ಪಿಎಂಯುವೈ (ಉಜ್ವಲ) ಫಲಾನುಭವಿಗಳಿಗೆ ಪ್ರತಿ ಸಿಲಿಂಡರಿಗೆ 300 ರೂ. ಸಹಾಯಧನ ನೀಡಲಾಗುತ್ತಿದೆ. ಉಳಿದಂತೆ ಯಾರಿಗೂ ಸಹಾಯಧನ ಕೊಡುತ್ತಿಲ್ಲ. ಎಚ್ಪಿ ಗ್ಯಾಸ್ ಏಜೆನ್ಸಿ ಪಾಲುದಾರ ವಿಷ್ಣು ಆಚಾರ್ಯರ ಪ್ರಕಾರ, ಇ ಕೆವೈಸಿ ಕಡ್ಡಾಯ. ಈ ನಿಟ್ಟಿನಲ್ಲಿ ಗ್ಯಾಸ್ ಪಾಸ್ ಬುಕ್ಕಿನೊಂದಿಗೆ ಆಧಾರ್ ನಕಲುಪ್ರತಿಯನ್ನು ಜನವರಿ ನಂತರವೂ ತಂದುಕೊಡಬಹುದು. 22,000 ಸಂಪರ್ಕಗಳ ಪೈಕಿ ವಾರದಲ್ಲಿ 1,300 ಮಂದಿ ಇ ಕೆವೈಸಿ ಮಾಡಿಸಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಹರಡಿ ಜನರಲ್ಲಿದಿಗಿಲು ಹುಟ್ಟಿಸಿ ಮತ ಗಳಿಸುವ ರಾಜಕೀಯ ಪಿತೂರಿ (ಟೂಲ್ ಕಿಟ್) ಭಾಗವೂ ಇದಾಗಿರಬಹುದು ಎಂದು ಸ್ಥಳೀಯರಾದ ಬಾಲಾಜಿ ರಾಘವೇಂದ್ರ ಆಚಾರ್ಯ ಹೇಳುತ್ತಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 70,000 ಉಜ್ವಲ ಫಲಾನುಭವಿಗಳಿದ್ದು ಮೊದಲ ಆದ್ಯತೆಯಲ್ಲಿ ಹಾಗೂ ಉಳಿದಂತೆ ಆಧಾರ್ ಒದಗಿಸಿದ ಫಲಾನುಭವಿಗಳಿಂದ ಬಯೋಮೆಟ್ರಿಕ್ ಪಡೆದುಕೊಳ್ಳಬೇಕು. ಉಳಿದಂತೆ ಹರಿದಾಡುತ್ತಿರುವ ಸಂದೇಶದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಮಂಗಳೂರು ಉಜ್ವಲ ಯೋಜನೆ ನೋಡೆಲ್ ಅಧಿಕಾರಿ ರಾಹುಲ್ ಹೇಳುತ್ತಾರೆ.

ಮೋದಿ 500 ರೂಪಾಯಿಗೆ ಸಿಲಿಂಡರ್ ಕೊಡ್ತಾರೆ
ನರೇಂದ್ರ ಮೋದಿ ಮೂರು ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ರಾಜಸ್ತಾನದಲ್ಲಿ 500 ರೂ. ಸಿಲಿಂಡರ್ ನೀಡುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ. ಅದರಂತೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಸಿಲಿಂಡರ್ ದರ 500 ರೂ. ಮಾಡುತ್ತಾರೆ. ಆಗ ಇ ಕೆವೈಸಿ ಬೇಕೆ ಬೇಕು ಎಂಬ ವದಂತಿಗಳು ಹರಿದಾಡುತ್ತಿವೆ. ಇನ್ನೊಂದೆಡೆ ಗ್ಯಾಸ್ ಸಿಲಿಂಡರ್ನ ಇ-ಕೆವೈಸಿ ಬೇಗ ಮಾಡಿಸಿ ಇಲ್ಲದಿದ್ದರೆ ಜನೆವರಿಯಿಂದ ನಿಮಗೆ ಸಿಲಿಂಡರ್ ದೊರಕುವುದಿಲ್ಲ ಎಂಬ ಸುಳ್ಳು ಮಾಹಿತಿಗಳು ಇವೆ