
ಬಾಗಲಕೋಟೆ: ಲೋಕಸಭೆಯಲ್ಲಿ ಭದ್ರತಾ ಲೋಪ (Parliament Security Breach) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಬಾಗಲಕೋಟೆ ನಿವೃತ್ತ ಡಿವೈಎಸ್‌ಪಿ ಅವರ ಮಗ ಸಾಯಿ ಕೃಷ್ಣನನ್ನು (Sai Krishna) ದೆಹಲಿ ಪೊಲೀಸರು (Delhi Police) ವಶಕ್ಕೆ ಪಡೆದಿದ್ದಾರೆ.
ಮನೋರಂಜನ್ (Manoranjan) ಸ್ನೇಹಿತನಾಗಿರುವ ಸಾಯಿ ಕೃಷ್ಣ ಬೆಂಗಳೂರು ಬಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ನೇಹಿತನಾಗಿದ್ದ. 2008-9ರಲ್ಲಿ ಇಬ್ಬರೂ ರೂಮ್‌ಮೇಟ್ ಆಗಿದ್ದರು.

ತನ್ನ ಡೈರಿಯಲ್ಲಿ ಸಾಯಿಕೃಷ್ಣ ಹೆಸರನ್ನು ಮನೋರಂಜನ್ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸಾಯಿಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ. ನವನಗರ ಠಾಣೆಯಲ್ಲಿ ಕೆಲ ಕಾಲ ವಿಚಾರಣೆ ನಡೆಸಿ ತಡರಾತ್ರಿ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ.
ಈ ಮಧ್ಯೆ ಸಾಯಿಕೃಷ್ಣಾ ಆರೋಪಿ ಅಲ್ಲ, ನಮ್ಮ ತಮ್ಮ ತುಂಬಾ ಮುಗ್ದ ಎಂದು ಸಾಯಿಕೃಷ್ಣ ಸಹೋದರಿ ಸ್ಪಂದನಾ ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿರುವ ಸ್ಪಂದನಾ ನನ್ನ ತಮ್ಮ ನಿರ್ದೋಷಿಯಾಗಿ ಹೊರ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಯಿಕೃಷ್ಣ ಯಾರು?
ವಿದ್ಯಾಗಿರಿಯ 11ನೇ ಕ್ರಾಸ್ ನಿವಾಸಿಯಾಗಿರುವ ಸಾಯಿಕೃಷ್ಣ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಸೀನಿಯರ್ ಎಂಜಿನಿಯರ್ ಆಗಿದ್ದಾನೆ. ವರ್ಕ್ ಫ್ರಂ ಹೋಂ ಮಾಡುತ್ತಿದ್ದರಿಂದ ಮನೆಯಿಂದಕೆಲಸ ಮಾಡುತ್ತಿದ್ದ.