
ಕರ್ನಾಟಕ ಕೊವಿಡ್ ಮಾರ್ಗಸೂಚಿ: ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ನ ಜೆಎನ್1 ರೂಪಾಂತರಿ ತಳಿಯಿಂದಾಗಿ ಸೋಂಕು ಹರಡುತ್ತಿದ್ದು, ರಾಜ್ಯದಲ್ಲಿಯೂ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಸೋಂಕು ಹರಡುವಿಕೆ ತಡೆಗೆ ಹಲವು ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದ್ದು, ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರ ವಿವರ ಇಲ್ಲಿದೆ.

ಬೆಂಗಳೂರು, ಡಿಸೆಂಬರ್ 19: ಕೊರೊನಾ ವೈರಸ್ನ ಜೆಎನ್1 ರೂಪಾಂತರಿಯಿಂದಾಗಿ ಕೋವಿಡ್-19 ಸೋಂಕು ಹರಡುವಿಕೆ ತೀವ್ರಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಂಗಳವಾರ ಮಾರ್ಗಸೂಚಿ (Covid 19 Guidelines) ಬಿಡುಗಡೆ ಮಾಡಿದೆ. ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಳ ಮಾಡಲು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಿ ವರದಿಯನ್ನು ಇಲಾಖೆಗೆ ಸಲ್ಲಿಸಲು ಸೂಚನೆ ನೀಡಲಾಗಿದೆ. ತೀವ್ರ ಶ್ವಾಸಕೋಶ ಹಾಗೂ ಉಸಿರಾಟದ ಸಮಸ್ಯೆ ಇರುವವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲು ಸೂಚಿಸಲಾಗಿದೆ.

ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ವಿಧಿಸುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಆರೋಗ್ಯ ಇಲಾಖೆ ತಿಳಿಸಿದೆ.
ಕೋವಿಡ್ ಮಾರ್ಗಸೂಚಿಯಲ್ಲೇನೇನಿದೆ?
- ಕೇರಳ, ತಮಿಳುನಾಡು ರಾಜ್ಯಗಳ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಳ
- ಕೊವಿಡ್ ನಿರ್ಬಂಧ ಅವಶ್ಯಕತೆ ಇಲ್ಲ
- ಗಡಿ ಜಿಲ್ಲೆಗಳಲ್ಲಿ ಅಗತ್ಯ ಸಂಖ್ಯೆಯ ಪರೀಕ್ಷೆಗಳನ್ನು ಹೆಚ್ಚಿಸಬೇಕು
- ಗಡಿ ಜಿಲ್ಲೆಗಳ ಕೋವಿಡ್ ಪರೀಕ್ಷಾ ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಲು ಜಿಲ್ಲಾಡಳಿತಗಳಿಗೆ ಸೂಚನೆ
- ತೀವ್ರ ಶ್ವಾಸಕೋಶ, ಉಸಿರಾಟದ ಸಮಸ್ಯೆ ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು
- ರೋಗ ಲಕ್ಷಣ ಇರುವವರನ್ನು ಕೊವಿಡ್ ಪರಿಶೀಲನೆಗೆ ಒಳಪಡಿಸಬೇಕು
- ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ಸ್ಥಾಪನೆಗೆ ಸೂಚನೆ
- ಡಿ.3, 4ನೇ ವಾರದಲ್ಲಿ ಮಾಕ್ ಡ್ರಿಲ್ ಮುಕ್ತಾಯಗೊಳಿಸಲು ಸೂಚನೆ
ಎರಡು ಪ್ರತ್ಯೇಕ ಮಾರ್ಗಸೂಚಿ
ಕೋವಿಡ್ ಬಗ್ಗೆ ಎರಡು ಪ್ರತ್ಯೇಕ ಮಾರ್ಗಸೂಚಿಗಳನ್ನು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಒಂದು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ, ಸಿಇಒ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆಗಿದ್ದರೆ ಮತ್ತೊಂದು ಸಾರ್ವಜನಿಕ ಸಲಹಾ ಮಾರ್ಗಸೂಚಿಯಾಗಿದೆ. ಜಿಲ್ಲಾಧಿಕಾರಿ, ಸಿಇಒ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕೋವಿಡ್ ಸರ್ವೇಕ್ಷಣೆ ಹಾಗೂ ಮೇಲುಸ್ತುವಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಮತ್ತೊಂದಡೆ, ಕೋವಿಡ್ ಹೆಚ್ಚಳ ಆಗುತ್ತಿರುವ ಕಾರಣ ಸಾರ್ವಜನಿಕರಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.