
ಮಂಗಳೂರು: ‘ಸೋನಿ ಲೈವ್’ ಓಟಿಟಿ ಪ್ಲಾಟ್ ಫಾರ್ಮ್ ಮುಂಬೈಯಲ್ಲಿ ಆಯೋಜಿಸಿರುವ ‘ಮಾಸ್ಟರ್ ಶೆಫ್ ಇಂಡಿಯಾ’ ಸ್ಪರ್ಧೆಯಲ್ಲಿ ಮಂಗಳೂರಿನ 24ರ ಹರೆಯದ ಯುವಕ ಮುಹಮ್ಮದ್ ಆಶಿಕ್ ವಿಜೇತರಾಗಿದ್ದಾರೆ.

ಫೈನಲ್ ತಲುಪಿದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಸೇರಿದಂತೆ ನಾಲ್ವರಲ್ಲಿ ಒಬ್ಬರಾಗಿದ್ದ ಮುಹಮ್ಮದ್ ಆಶಿಕ್, ‘ಮಾಸ್ಟರ್ ಶೆಫ್ ಇಂಡಿಯಾ’ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ಸ್ಪರ್ಧೆಯ ಫೈನಲ್ ಸಂಚಿಕೆ ಪ್ರಸಾರವಾಗಿದ್ದು ಅದರಲ್ಲಿ ಆಶಿಕ್ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ದ.ಕ.ಜಿಲ್ಲೆಯ ಯುವಕನೊಬ್ಬ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜಯಿಯಾದ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಗೆದ್ದ ಪ್ರಪ್ರಥಮ ದಕ್ಷಿಣ ಭಾರತೀಯ ಎಂಬ ಹೆಗ್ಗಳಿಕೆಯೂ ಆಶಿಕ್ ಅವರದ್ದು.
ಆಶಿಕ್ ತನ್ನ 20ರ ಹರೆಯದಲ್ಲೇ ನಗರದ ಬಲ್ಮಠದಲ್ಲಿ ‘ಕುಲ್ಕಿ ಹಬ್’ ತೆರೆದ ಮುಹಮ್ಮದ್ ಆಶಿಕ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಪೂರ್ಣಪ್ರಮಾಣದಲ್ಲಿ ‘ ಶೆಫ್ ’ ಆಗಲು ನಿರ್ಧರಿಸಿ ರಾತ್ರಿ ಹಗಲೆನ್ನದೆ ಶ್ರಮಿಸಿದರು. ಹಾಗೇ ‘ ಶೆಫ್’ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಹೈದರಾಬಾದ್, ಬೆಂಗಳೂರಿನಲ್ಲಿ ನಡೆದ ‘ ಶೆಫ್ ’ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಮಂಗಳೂರಿನಲ್ಲಿ ನಡೆದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರು. ಕಳೆದ ಬಾರಿ ‘ಸೋನಿ ಟಿವಿ’ ಸಂಸ್ಥೆಯವರು ಆಯೋಜಿಸಿದ ಸ್ಪರ್ಧೆಯಲ್ಲಿ ಪಾಲ್ಗೊಂಡರೂ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ಮುಹಮ್ಮದ್ ಆಶಿಕ್ ಧೃತಿಗೆಡಲಿಲ್ಲ. ಈ ಬಾರಿ ಮತ್ತೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಛಲಬಿಡದೆ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು. ದೇಶಾದ್ಯಂತ ಸುಮಾರು 30 ಸಾವಿರ ಸ್ಪರ್ಧಾಳುಗಳ ಪೈಕಿ ಮುಹಮ್ಮದ್ ಆಶಿಕ್ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಟಾಪ್ 12ರಲ್ಲಿ ಸ್ಥಾನ ಪಡೆದಿದ್ದರು. ನಂತರ ಹಿಂದಿರುಗಿ ನೋಡದ ಅವರು ಇದೀಗ ‘ಮಾಸ್ಟರ್ ಶೆಫ್ ಇಂಡಿಯಾ’ ವಿಜೇತರಾಗಿದ್ದಾರೆ.
