
ಪ್ರಶ್ನೆಗಾಗಿ ನಗದು’ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್‌ನಿಂದ ಉಚ್ಚಾಟನೆ ಮಾಡಲಾಗಿದೆ.
ಮಹುವಾ ಮೊಯಿತ್ರಾ ಮೇಲಿನ ಆರೋಪಕ್ಕೆ ಸಂಬಂಧಪಟ್ಟಂತೆ ಲೋಕಸಭೆಯ ನೈತಿಕ ಸಮಿತಿಯ ವರದಿಯನ್ನು ಸಮಿತಿಯ ಮುಖ್ಯಸ್ಥ, ಬಿಜೆಪಿ ಸಂಸದ ವಿಜಯ್ ಸೋನ್ಕರ್ ಇಂದು ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಿದರು.

ಹಣ ಪಡೆದು ತಮ್ಮ ಸಂಸದೀಯ ಪೋರ್ಟಲ್ ಬಳಸಿ ಉದ್ಯಮಿ ದರ್ಶನ್ ಹಿರಾನಂದಾನಿಗೆ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲು ಶಿಫಾರಸು ಮಾಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲ ಉಂಟಾಯಿತು. ಹಾಗಾಗಿ ಸ್ಪೀಕರ್ ಕಲಾಪವನ್ನು ಅಪರಾಹ್ನ 2 ಗಂಟೆಗೆ ಮುಂದೂಡಿಕೆ ಮಾಡಿದರು.
2 ಗಂಟೆಗೆ ಕಲಾಪ ಪುನರಾರಂಭವಾದ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ನೈತಿಕ ಸಮಿತಿಯ ವರದಿಯನ್ನು ಚರ್ಚಿಸಲು ಪ್ರಸ್ತಾವನೆಯನ್ನು ಮಂಡಿಸಿದರು. ಬಳಿಕ ನೈತಿಕ ಸಮಿತಿಯ ವರದಿಯನ್ನು ಸಂಸತ್‌ನಲ್ಲಿ ಅಂಗೀಕರಿಸಲಾಯಿತು.
ಸದನದ ನಿರ್ಧಾರವನ್ನು ಓದಿದ ಸ್ಪೀಕರ್ ಓಂ ಬಿರ್ಲಾ, ಮಹುವಾ ಮೊಯಿತ್ರಾ ಅವರ ನಡವಳಿಕೆಯು ಸಂಸದರಾಗಿ ಅನೈತಿಕ ಮತ್ತು ಸರಿಯಾದುದಲ್ಲ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನವು ಒಪ್ಪಿಕೊಂಡಿದೆ. ಹಾಗಾಗಿ, ಅವರು ಸಂಸದೆಯಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ಹೇಳಿದರು. ಸಂಸತ್ ಕಲಾಪವನ್ನು ನವೆಂಬರ್ 11ವರೆಗೆ ಮುಂದೂಡಿಕೆ ಮಾಡಿದರು.

ಸಂಸತ್‌ನಿಂದ ಹೊರ ನಡೆದ ಪ್ರತಿಪಕ್ಷ ಸದಸ್ಯರು:
ಮಹುವಾ ಮೊಯಿತ್ರಾ ಅವರನ್ನು ಸಂಸತ್‌ನಿಂದ ಉಚ್ಚಾಟನೆ ಮಾಡುವ ನಿರ್ಧಾರವನ್ನು ಸ್ಪೀಕರ್ ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್, ಟಿಎಸಿಂ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಸಂಸತ್‌ನಿಂದ ಹೊರ ನಡೆದರು. ಬಳಿಕ ಸಂಸತ್ ಭವನದ ಹೊರಗಿನ ಗಾಂಧಿ ಪ್ರತಿಮೆ ಬಳಿ ನಿಂತು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಿಯಮ ಉಲ್ಲಂಘಿಸಿ ಉಚ್ಚಾಟನೆ : ಮಹುವಾ ಆಕ್ರೋಶ
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್‌ನಿಂದ ಉಚ್ಚಾಟನೆ ಮಾಡುವ ಘೋಷಣೆ ಮಾಡುತ್ತಿದ್ದಂತೆ ಪ್ರತಿಪಕ್ಷ ನಾಯಕರೊಂದಿಗೆ ಸಂಸತ್‌ನಿಂದ ಹೊರ ನಡೆದ ಮಹುವಾ ಮೊಯಿತ್ರಾ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನನ್ನನ್ನು ಉಚ್ಚಾಟನೆ ಮಾಡಲಾಗಿದೆ. ಸಂಪೂರ್ಣವಾಗಿ ನಿಯಮ ಉಲ್ಲಂಘಿಸಲಾಗಿದೆ” ಎಂದರು.
ಮಹುವಾಗೆ ಮಾತನಾಡಲು ಅವಕಾಶ ನಿರಾಕರಣೆ :
ತನ್ನನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡುತ್ತಿದ್ದಂತೆ ಮಾತನಾಡಲು ಅವಕಾಶ ನೀಡುವಂತೆ ಮಹುವಾ ಮೊಯಿತ್ರಾ ಸ್ಪೀಕರ್‌ಗೆ ಮನವಿ ಮಾಡಿದರು. ಯಾವುದೇ ಆರೋಪದ ವಿರುದ್ಧ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದು ಆರೋಪಿಯ ಮೂಲಭೂತ ಹಕ್ಕು ಎಂದರು. ಟಿಎಂಸಿ ಸಂಸದರಾದ ಸುದೀಪ್ ಬಂಡೋಪಾಧ್ಯಾಯ ಸೇರಿದಂತೆ ಹಲವರು ಮಹುವಾ ಬೆಂಬಲಕ್ಕೆ ನಿಂತು, ಮಾತನಾಡಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.
ಆದರೆ, ಮಹುವಾಗೆ ಮಾತನಾಡಲು ಅವಕಾಶ ನಿರಾಕರಿಸಿದ ಸ್ಪೀಕರ್, ಅದಕ್ಕೆ ಕಾರಣಗಳನ್ನು ಕೊಟ್ಟರು. ಈ ಹಿಂದಿನ ಸ್ಪೀಕರ್‌ಗಳು ಇಂತಹ ಪ್ರಕರಣಗಳಲ್ಲಿ ಅನುಸರಿಸಿದ ಸಾಂಪ್ರದಾಯಿಕ ನಿಯಮವನ್ನು ನಾನೂ ಅನುಸರಿಸುತ್ತೇನೆ. ಈ ಹಿಂದೆ ಮಾಜಿ ಸ್ಪೀಕರ್‌ಗಳಾದ ಸೋಮನಾಥ್ ಚಟರ್ಜಿ ಮತ್ತು ಪ್ರಣಬ್ ಮುಖರ್ಜಿ ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದರು.
ಸರ್ಕಾರದ ಪರವಾಗಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, 2005 ರ ‘ಪ್ರಶ್ನೆಗಾಗಿ ನಗದು’ ಪ್ರಕರಣದಲ್ಲಿ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿಯವರ ನಡೆಯನ್ನುಉಲ್ಲೇಖಸಿದರು. ಬಿಜೆಪಿ ಆರು ಮತ್ತು ಕಾಂಗ್ರೆಸ್‌ನ ಒಬ್ಬರು ಸಂಸದರ ಮೇಲೆ ಮಹುವಾ ರೀತಿಯ ಆರೋಪ ಕೇಳಿ ಬಂದಾಗ ಅವರು ನೈತಿಕ ಸಮಿತಿಯ ಮುಂದೆ ಹೇಳಿಕೆ ದಾಖಲಿಸಿದ್ದರು. ಬಳಿಕ ಆರೋಪಿತ ಸಂಸದರಿಗೆ ಸಂಸತ್‌ನಲ್ಲಿ ಮಾತನಾಡಲು ಅವಕಾಶ ನೀಡಿರಲಿಲ್ಲ ಎಂದರು.
ಮಹುವಾ ಮೇಲಿನ ಆರೋಪವೇನು?
ಕೈಗಾರಿಕೋದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ದುಬಾರಿ ಉಡುಗೊರೆಗಳನ್ನು ಪಡೆದುಕೊಂಡು ತನ್ನ ಸಂಸತ್ತಿನ ಲಾಗಿನ್ ಐಡಿ ನೀಡಿದ್ದಾರೆ ಮತ್ತು ಪ್ರಧಾನಿ ಮೋದಿ, ಅದಾನಿ ಸಮೂಹದ ವಿರುದ್ಧ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದಾರೆ ಎಂಬ ಆರೋಪ ಸಂಸದೆ ಮಹುವಾ ಮೊಯಿತ್ರಾ ಮೇಲಿದೆ. ಈ ಸಂಬಂಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಲೋಕಸಭೆಗೆ ದೂರು ನೀಡಿದ್ದರು.