
Manikanta Rathod: ಅಪಘಾತವನ್ನೇ ಕೊಲೆಯತ್ನ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುದ್ದಿಗೋಷ್ಠಿಗೂ ಮುನ್ನವೇ ಕಲಬುರಗಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಕಲಬುರಗಿ, (ಡಿಸೆಂಬರ್ 07): ಅಪಘಾತದಲ್ಲಿ ಆಗಿದ್ದ ಗಾಯವನ್ನು ಹಲ್ಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ನನ್ನು(Manikanta Rathod) ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ. ಕಲಬುರಗಿ ನಗರದ ಭಾರತ್ ಪ್ರೈಡ್ ಅಪಾರ್ಟ್ಮೆಂಟ್‌ನಲ್ಲಿದ್ದ ಮಣಿಕಂಠ್ ರಾಠೋಡ್ ನನ್ನು ಇಂದು(ಡಿಸೆಂಬರ್ 07) ಚೌಕ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತವನ್ನು ಕೊಲೆ ಯತ್ನ ಎಂದು ಬಿಂಬಿಸಿದ್ದ ಮಣಿಕಂಠ ರಾಠೋಡನ ಅಸಲಿಯತ್ತು ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿತ್ತು. ಇದರ ಬೆನ್ನಲ್ಲೇ ಇಂದು ಮಣಿಕಂಠ ರಾಠೋಡ್ ಸುದ್ದಿಗೋಷ್ಠಿ ಕರೆದಿದ್ದರು. ಆದ್ರೆ, ಪೊಲೀಸರು ಸುದ್ದಿಗೋಷ್ಠಿ ನಡೆಸುವ ಮುನ್ನವೇ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.

ಕಾರು ಅಪಘಾತವನ್ನೇ ಹಲ್ಲೆ ಮಾಡಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಸಿದ್ದ ಮಣಿಕಂಠ ರಾಠೋಡ್ ಅಸಲಿಯತ್ತು ಬಟಾಬಯಲಾಗಿದೆ. ಹಲ್ಲೆ ಪ್ರಕರಣ ಸಂಬಂಧ ಮಣಿಕಂಠ ರಾಠೋಡ್ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಮಣಿಕಂಠನ ನೌಟಂಕಿ ಆಟ ಬಯಲಾಗಿದೆ. ಈ ಮೂಲಕ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಕಾರು ಅಪಘಾತದಲ್ಲಿ ಗಾಯಗೊಂಡು ಹಲ್ಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದರು ಎನ್ನುವುದು ಗೊತ್ತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.