
ಪ್ಯಾಂಗ್ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಭೆಯೊಂದರಲ್ಲಿ ಕಣ್ಣೀರು ಸುರಿಸಿದ ಘಟನೆ ನಡೆದಿದೆ. ಉತ್ತರ ಕೊರಿಯದಲ್ಲಿ ಜನನ ಪ್ರಮಾಣವು ತಗ್ಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕೆಂದು ಕರೆ ನೀಡಿದ ಕಿಮ್ ಜಾಂಗ್ ಉನ್ ಕಣ್ಣೀರು ಸುರಿಸಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ತಾಯಂದಿರ ದಿನದ ಅಂಗವಾಗಿ ಭಾನುವಾರ ಪ್ಯಾಂಗ್ಯಾಂಗ್‌ನಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಕಿಮ್ ಜಾಂಗ್ ಉನ್, “ಉತ್ತರ ಕೊರಿಯದಲ್ಲಿ ಜನನ ಪ್ರಮಾಣವು ಕುಸಿಯುತ್ತಿದೆ. ಹಾಗಾಗಿ ರಾಷ್ಟ್ರೀಯ ಶಕ್ತಿಯನ್ನು ಬಲಪಡಿಸುವ ಭಾಗವಾಗಿ ದೇಶದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರಬೇಕು’ ಎಂದು ಹೇಳಿ ಭಾವುಕರಾದರು. ತಮ್ಮ ಕರವಸ್ತ್ರದಿಂದ ಕಣ್ಣೀರನ್ನು ಒರೆಸಿಕೊಂಡರು. ಇದನ್ನು ಕಂಡು ಅಲ್ಲಿ ನೆರೆದಿದ್ದ ಮಹಿಳೆಯರು ಕೂಡ ಭಾವುಕರಾದರು.
