
ಈ ಚೇಷ್ಟೆಯನ್ನು ಕಿಡಿಗೇಡಿತನ ಅಂತ ಹೇಳಲಾಗಲ್ಲ, ಇದೊಂದು ದೊಡ್ಡ ಅಪರಾಧ. ಬೆದರಿಕೆಯ ಈಮೇಲ್ ಬಂದಿರುವ ಶಾಲೆಗಳಲ್ಲಿ ಓದುವ ಮಕ್ಕಳು ಮತ್ತು ಪೋಷಕರು ಅನುಭವಿಸುವ ಭೀತಿ ಮತ್ತು ಆತಂಕದ ಬಗ್ಗೆ ಯೋಚಿಸಿ ನೋಡಿ. ತಂದೆತಾಯಿಗಳಿಬ್ಬರೂ ಉದ್ಯೋಗಸ್ಥರಾಗಿದ್ದು ತಮ್ಮ ತಮ್ಮ ಕಚೇರಿಗಳಿಗೆ ಹೋಗಿದ್ದಾಗ ವಿಷಯ ಗೊತ್ತಾಗಿ ಬೆಂಗಳೂರಿನ ಟ್ರಾಫಿಕ್ ನಲ್ಲಿ ಆವರು ತಮ್ಮ ಮಗ/ಮಗಳು ಓದುವ ಶಾಲೆಗೆ ಆತಂಕದಲ್ಲಿ ಧಾವಿಸುವ ದೃಶ್ಯವನ್ನು ಕಲ್ಪಿಸಿಕೊಳ್ಳಿ. ನಮಗೂ ಹೆದರಿಕೆಯಾಗುತ್ತದೆ. ದುಷ್ಟರಿಗೆ ಭಾರೀ ಪ್ರಮಾಣದ ಶಿಕ್ಷೆಯಾಗಬೇಕು.

ಬೆಂಗಳೂರು: ವಿಕೃತ ಮನಸ್ಸಿನ ದುಷ್ಟರು ಮತ್ತೊಮ್ಮೆ ನಗರದ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಈಮೇಲ್ ಗಳನ್ನು ಕಳಿಸಿ ದಾರ್ಷ್ಟ್ಯತೆ ಮೆರೆದಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್ (B Dayanand), ಪೋಷಕರು ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ, ಬಾಂಬ್ ಪತ್ತೆ ದಳ (bomb squad) ಮತ್ತು ನಿಷ್ಕ್ರಿಯ ದಳಗಳನ್ನು ಬೆದರಿಕೆಗೊಳಗಾಗಿರುವ ಎಲ್ಲ ಶಾಲೆಗಳಿಗೆ ಕಳಿಸಲಾಗಿದ್ದು ಅವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಕಳೆದ ಸಲದ ಹಾಗೆ ಈ ಬಾರಿಯೂ ಕಿಡಿಗೇಡಿಗಳ ಹುಸಿ ಬೆದರಿಕೆ ಕರೆಗಳಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಆಯುಕ್ತ ಹೇಳಿದರು. ಹಿಂದೆ ಹೀಗೆಯೇ ಶಾಲೆಗಳಿಗೆ ಹುಸಿ ಬೆದರಿಕೆಯ ಕರೆ ಮತ್ತು ಈಮೇಲ್ ಗಳು ಬಂದಾಗ ಪರಿಶೀಲನೆ ನಡೆಸಿ ಪತ್ತೆ ಮಾಡಲಾಗಿತ್ತು ಎಂದು ಆಯುಕ್ತರು ಹೇಳಿದರಾದರೂ ಆ ಕಿಡಿಗೇಡಿಗಳು ಯಾರು ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿತ್ತು ಅನ್ನೋದನ್ನು ಹೇಳಲಿಲ್ಲ.
