
ತುಮಕೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಗರದ ಸದಾಶಿವನಗರದಲ್ಲಿ ನಡೆದಿದೆ. ಪತಿ ಗರೀಬ್ ಸಾಬ್ (32), ಪತ್ನಿ ಸುಮಯ್ಯ (30), ಮಗಳು ಹಾಜಿರಾ (14), ಗಂಡು ಮಕ್ಕಳಾದ ಮೊಹ್ಮದ್ ಸುಭಾನ್ (10), ಮೊಹಮದ್ ಮುನೀರ್ (8) ಮೃತ ದುರ್ದೈವಿಗಳು.

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ತನಿಖೆ ವೇಳೆ ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಐವರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತುಮಕೂರು ಎಸ್ಪಿ ಅಶೋಕ್ ಕೆ. ವಿ, ನಮಗೆ ಸಂಜೆ 7.30ಗೆ ಕರೆ ಬಂದಿದೆ. ಒಂದೇ ಮನೆಯಲ್ಲಿ ಐವರು ನೇಣು ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಬಂತು. ಐದು ನಿಮಿಷಕ್ಕೆ ನಾವು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇವು. ಇಬ್ಬರ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದವು. ಮೂವರು ಮಕ್ಕಳ ಮೃತ ದೇಹ ಹಾಸಿಗೆಯಲ್ಲಿದ್ದವು. ಮೃತರು ಶಿರಾ ತಾಲೂಕಿನ ಲಕ್ಕನಹಳ್ಳಿಯವರು. ಸಾಯುವ ಮುನ್ನ ಸಂಬಂಧಿಕರಿಗೆ ವಿಡಿಯೋ ಮೆಸೇಜ್ ಕಳುಹಿಸಿದ್ದಾರೆ. ಅದರಲ್ಲಿ ಏನು ಮಾಹಿತಿಯಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ವಿಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ಕಬಾಬ್ ಅಂಗಡಿ ಇಟ್ಟುಕೊಂಡಿದ್ದರು. ಒಂದು ವರ್ಷದಿಂದ ಸದಾಶಿವನಗರದಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದ್ದರು.