
ಬೆಂಗಳೂರಿನಲ್ಲಿ ನ.25 ಮತ್ತು 26ರಂದು ನಡೆಯಲಿರುವ ಕಂಬಳಕ್ಕೆ ಕುಸ್ತಿ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಬ್ರಿಜ್ ಅವರ ಆಹ್ವಾನ ರದ್ದುಗೊಳಿಸಲಾಗಿದೆ.

ಮಂಗಳೂರು, ನ.21: ಇದೇ ಮೊದಲ ಬಾರಿಗೆ ನಡೆಯಲಿರುವ ಕರಾವಳಿಯ ಪ್ರಸಿದ್ಧ ಕಂಬಳಕ್ಕೆ (Kambala)ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗುತ್ತಿದೆ. ಆದರೆ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ (Brij Bhushan Sharan Singh) ಅವರನ್ನು ಆಹ್ವಾನಿಸಲಾಗಿದ್ದು ಈ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕುಸ್ತಿ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಅವರನ್ನು ಇಂತಹ ಕಾರ್ಯಕ್ರಮಕ್ಕೆ ಕರೆದಿರುವುದು ಎಷ್ಟು ಸರಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿದ್ದವು. ಸದ್ಯ ಈಗ ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಬ್ರಿಜ್ ಭೂಷಣ್ ಪತ್ರ ಬರೆದು ತಿಳಿಸಿದ್ದಾರೆ.

ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾರತದ ಕುಸ್ತಿ ಫೆಡರೇಷನ್ ಮಾಜಿ ಆಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಅತಿಥಿಯಾಗಿ ಆಹ್ವಾನ ನೀಡಲು ಕುಸ್ತಿ ಅಸೋಸಿಯೇಷನ್ ಹಾಗೂ ಸಿದ್ದಿ ಜನಾಂಗ ಮನವಿ ಮಾಡಿತ್ತು. ಮನವಿ ಮೇರೆಗೆ ಕಂಬಳ ಸಮಿತಿ ಆಹ್ವಾನ ನೀಡಿತ್ತು. ಈ ಸಂಬಂಧ ವಿರೋಧ ಹಿನ್ನಲೆ ಬ್ರಿಜ್ ಭೂಷಣ್ ಅವರಿಗೆ ಕರೆ ಮಾಡಿ ಕಂಬಳ ಸಮಿತಿ ವಿವರ ನೀಡಿದ್ದು ತಾವು ಕಂಬಳಕ್ಕೆ ಅತಿಥಿಯಾಗಿ ಬರಲ್ಲ ಎಂದು ಪತ್ರ ಬರೆದು ಬ್ರಿಜ್ ಭೂಷಣ್ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ಕಂಬಳ ಸಮಿತಿ ಮುಖ್ಯಸ್ಥ ಅಶೋಕ್ ರೈ
ಮಾಹಿತಿ ನೀಡಿದ್ದಾರೆ. ವಿರೋಧ ವ್ಯಕ್ತವಾದ ಹಿನ್ನಲೆ ಬ್ರಿಜ್ ಅವರ ಆಹ್ವಾನ ರದ್ದುಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
