
ತಲೆ ಹೊದಿಕೆಯನ್ನು ಧರಿಸಿಕೊಂಡು ಬರುವ ಅಭ್ಯರ್ಥಿಗಳಿಗೆ ನಾವು ಈ ಸೂಚನೆಯನ್ನು ನೀಡಿದ್ದೇವೆ. ಇಂತಹ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚೆ ಬರಬೇಕು. ಕೇಂದ್ರದಲ್ಲಿ ಸಂಪೂರ್ಣ ಪರೀಕ್ಷೆ ಮಾಡಿದ ನಂತರವೇ ಕೊಠಡಿಯೊಳಗಡೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು ನ.15: ನವೆಂಬರ್ 18 ಮತ್ತು 19 ರಂದು ವಿವಿಧ ನಿಗಮ ಮಂಡಳಿಗಳಿಗಳಿಗೆ (Boards and Corporations) ನಡೆಯಲಿರುವ ನೇಮಕಾತಿ ಪರೀಕ್ಷೆ ಗಳಿಗೆ (Exam) ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ವಸ್ತ್ರ ಧರಿಸಿಕೊಂಡು ಬರುವಂತಿಲ್ಲ ಎಂಬ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸುತ್ತೋಲೆ ಮುಸ್ಲಿಂ ಮಹಿಳಾ ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಹಿಜಾಬ್ಗು ಅವಕಾಶ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಇದೀಗ ಪ್ರಾಧಿಕಾರ ಈ ಕುರಿತು ಸ್ಪಷ್ಟನೆ ನೀಡಿದ್ದು, ಈ ಹಿಂದಿನಂತೆ ಪರೀಕ್ಷಾ ಕೊಠಡಿಯೊಳಗೆ ಹಿಜಾಬ್ಗೆ ಅವಕಾಶ ನಿಡಲಾಗಿದೆ ಎಂದು ಹೇಳಿದೆ.

ಈ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಪ್ರಕಟಣೆ ಪ್ರಕಾರ: ನವೆಂಬರ್ 18 ಮತ್ತು 19 ರಂದು ನಡೆಯಲಿರುವ ಎರಡನೇ ಹಂತದ ನೇಮಕಾತಿ ಪರೀಕ್ಷೆಗಳಿಗೆ ಹಿಜಾಬ್ಗೆ ಅನುಮತಿ ಮುಂದುವರಿಯುತ್ತದೆ. ಪರೀಕ್ಷೆಗಳಿಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಎರಡು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಹೇಳಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾತನಾಡಿ ತಲೆ ಹೊದಿಕೆಯನ್ನು ಧರಿಸಿಕೊಂಡು ಬರುವ ಅಭ್ಯರ್ಥಿಗಳಿಗೆ ನಾವು ಈ ಸೂಚನೆಯನ್ನು ನೀಡಿದ್ದೇವೆ. ಇಂತಹ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚೆ ಬರಬೇಕು. ಕೇಂದ್ರದಲ್ಲಿ ಸಂಪೂರ್ಣ ಪರೀಕ್ಷೆ ಮಾಡಿದ ನಂತರವೇ ಕೊಠಡಿಯೊಳಗಡೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ
ತಾಳಿ ಮತ್ತು ಕಾಲುಂಗುರಕ್ಕೂ ಅನುಮತಿ
ಹಿಂದೂ ಅಭ್ಯರ್ಥಿಗಳು ಧರಿಸುವ ತಾಳಿ ಮತ್ತು ಕಾಲುಂಗುರಗಳನ್ನು ಪರೀಕ್ಷಾ ಕೊಠಡಿಗಳಿಗೆ ನಿಷೇಧಿಸಿದಕ್ಕೆ ಬಲಪಂಥಿಯ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಕೆಇಎ ತಾಳಿ ಮತ್ತು ಕಾಲುಂಗರಗಳನ್ನು ಹೊರತುಪಡಿಸಿ ಮಹಿಳೆಯರು ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ ಎಂದು ಹೇಳಿದೆ. ಪರೀಕ್ಷಾ ಸಭಾಂಗಣಗಳಲ್ಲಿ ಬ್ಲೂಟೂತ್ ಸಾಧನಗಳ ಬಳಕೆಯನ್ನು ತಡೆಗಟ್ಟುವ ಸಲುವಾಗಿ, ಕ್ಯಾಪ್ಗಳು ಅಥವಾ ಬಾಯಿ, ಕಿವಿ ಮತ್ತು ತಲೆಯನ್ನು ಮುಚ್ಚುವ ಬಟ್ಟೆ ಅಥವಾ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 28 ರಂದು ಕಲಬುರಗಿ ಮತ್ತು ಯಾದಗಿರಿ ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಪ್ರಥಮ ವಿಭಾಗದ ಸಹಾಯಕರ (ಎಫ್ಡಿಎ) ನೇಮಕಾತಿಗಾಗಿ ಪರೀಕ್ಷೆ ಬರೆದಾಗ ಬ್ಲೂಟೂತ್ ಸಾಧನಗಳನ್ನು ಬಳಸಿ ಸಿಕ್ಕಿಬಿದ್ದ 20 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಹೊಸ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.
ಅಕ್ಟೋಬರ್ನಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹಿಜಾಬ್ಗೆ ಅವಕಾಶ ಮಾಡಿಕೊಟ್ಟಿದ್ದರು.