
Indian Oil Imports: ಒಂದೆಡೆ ರಷ್ಯಾದಿಂದ ಭಾರತ ತೈಲ ಆಮದನ್ನು ಕಡಿಮೆ ಮಾಡಿದರೆ, ಸೌದಿ ಅರೇಬಿಯಾದಿಂದ ಪೂರೈಕೆ ಹೆಚ್ಚಿಸಿದೆ. ಭಾರತಕ್ಕೆ ಅತಿಹೆಚ್ಚು ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಯುಎಇಯನ್ನು ಸೌದಿ ಅರೇಬಿಯ ಹಿಂದಿಕ್ಕಿದೆ. ಸೌದಿ ಅರೇಬಿಯಾ ಮತ್ತು ಇರಾಕ್ ಎರಡೂ ದೇಶಗಳಿಂದ ಭಾರತಕ್ಕೆ ಪೂರೈಕೆಯಾಗುವ ಒಟ್ಟು ತೈಲ ಆಮದು ರಷ್ಯಾದ್ದನ್ನು ಮೀರಿಸುತ್ತದೆ.

ನವದೆಹಲಿ, ನವೆಂಬರ್ 1: ರಷ್ಯಾದಿಂದ ತೈಲ ಆಮದನ್ನು ಭಾರತ ಕಡಿಮೆ ಮಾಡಿದೆ. ರಷ್ಯಾದಿಂದ ಶೇ. 43ರಷ್ಟು ಇದ್ದ ಕಚ್ಚಾ ತೈಲ ಆಮದು (crude oil imports) ಈಗ ಶೇ. 35ಕ್ಕೆ ಬಂದಿದೆ. ಇನ್ನೊಂದೆಡೆ ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳಿಂದ ತೈಲ ಪೂರೈಕೆಯನ್ನು ಭಾರತ ಹೆಚ್ಚಿಸಿದೆ. ರಷ್ಯಾದಿಂದ ತೈಲ ಪಡೆಯುವುದನ್ನು ಭಾರತ ಕಡಿಮೆ ಮಾಡಲು ಪ್ರಮುಖ ಕಾರಣವೆಂದರೆ, ಬೆಲೆ ಹೆಚ್ಚಳ. ರಷ್ಯಾ ಈಗ ಮೊದಲಿನಂತೆ ದೊಡ್ಡ ಮಟ್ಟದ ಡಿಸ್ಕೌಂಟ್ ಕೊಡುತ್ತಿಲ್ಲ. ರಿಯಾಯಿತಿ ಬಹಳಷ್ಟು ಕಡಿಮೆ ಮಾಡಿದೆ. ಇದರಿಂದ ಭಾರತದ ತೈಲ ಕಂಪನಿಗಳಿಗೆ ಹೆಚ್ಚಿನ ಅನುಕೂಲ ತರುತ್ತಿಲ್ಲ. ಈ ಕಾರಣಕ್ಕೆ ಪೆಟ್ರೋಲಿಯಂ ಕಂಪನಿಗಳು ರಷ್ಯಾದ ಉರಲ್ (ತೈಲ) ಆಮದು ಕಡಿಮೆ ಮಾಡಿವೆ.

ರಷ್ಯಾದ ತೈಲ ಆಮದನ್ನು ಭಾರತೀಯ ಕಂಪನಿಗಳು ಕಡಿಮೆ ಮಾಡಲು ಇನ್ನೊಂದು ಅಸ್ಪಷ್ಟ ಕಾರಣ ಇದೆ. ರಷ್ಯಾದ ತೈಲ ಆಮದಿಗೆ ಅಮೆರಿಕ ಒಂದು ಬ್ಯಾರಲ್ಗೆ 60 ಡಾಲರ್ ದರದ ಮಿತಿ ಹಾಕಿದೆ. ಈ ನಿಯಮ ಮೀರಿ ರಷ್ಯಾ ತೈಲ ಸಾಗಿಸುತ್ತಿದ್ದ ಎರಡು ಟ್ಯಾಂಕರುಗಳನ್ನು ಅಮೆರಿಕ ತನಿಖೆಗೊಳಪಡಿಸಿದೆ. ಈ ಮೂಲಕ ಅಮೆರಿಕ ಬಹಿಷ್ಕಾರ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಸೂಚನೆ ಇದೆ. ಹೀಗಾಗಿ, ಭಾರತೀಯ ಕಂಪನಿಗಳು ರಷ್ಯಾದಿಂದ ತೈಲ ಪೂರೈಕೆಯನ್ನು ಕಡಿಮೆ ಮಾಡುತ್ತಿರಬಹುದು ಎನ್ನಲಾಗಿದೆ.

ಯುಎಇ ಮೀರಿಸಿದ ಸೌದಿ
ಒಂದೆಡೆ ರಷ್ಯಾದಿಂದ ಭಾರತ ತೈಲ ಆಮದನ್ನು ಕಡಿಮೆ ಮಾಡಿದರೆ, ಸೌದಿ ಅರೇಬಿಯಾದಿಂದ ಪೂರೈಕೆ ಹೆಚ್ಚಿಸಿದೆ. ಭಾರತಕ್ಕೆ ಅತಿಹೆಚ್ಚು ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಯುಎಇಯನ್ನು ಸೌದಿ ಅರೇಬಿಯ ಹಿಂದಿಕ್ಕಿದೆ. ಸೌದಿ ಅರೇಬಿಯಾ ಮತ್ತು ಇರಾಕ್ ಎರಡೂ ದೇಶಗಳಿಂದ ಭಾರತಕ್ಕೆ ಪೂರೈಕೆಯಾಗುವ ಒಟ್ಟು ತೈಲ ಆಮದು ರಷ್ಯಾದ್ದನ್ನು ಮೀರಿಸುತ್ತದೆ.
ಅಕ್ಟೋಬರ್ ತಿಂಗಳಲ್ಲಿ ರಷ್ಯಾದಿಂದ ಭಾರತ ದಿನಕ್ಕೆ 15 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಅದೇ ವೇಳೆ, ಸೌದಿ ಅರೇಬಿಯಾದಿಂದ ದಿನಕ್ಕೆ ಮಾಡಿಕೊಳ್ಳುವ ತೈಲ ಆಮದು 8.71 ಲಕ್ಷದಷ್ಟಿದೆ. ಹಿಂದಿನ ತಿಂಗಳು, ಅಂದರೆ ಸೆಪ್ಟೆಂಬರ್ನಲ್ಲಿ ಇದೇ ಸೌದಿ ಅರೇಬಿಯಾದಿಂದ ಭಾರತೀಯ ಕಂಪನಿಗಳು ಸರಾಸರಿಯಾಗಿ ದಿನವೊಂದಕ್ಕೆ 4.84 ಲಕ್ಷ ಬ್ಯಾರಲ್ ತೈಲಗಳನ್ನು ಆಮದು ಮಾಡಿಕೊಳ್ಳುತ್ತಿದ್ದವು. ಅಕ್ಟೋಬರ್ನಲ್ಲಿ ಈ ಪ್ರಮಾಣ ಬಹುತೇಕ ಡಬಲ್ ಆಗಿದೆ. ಇನ್ನೊಂದೆಡೆ, ಸೆಪ್ಟೆಂಬರ್ಗೆ ಹೋಲಿಸಿದರೆ ಅಕ್ಟೋಬರ್ನಲ್ಲಿ ರಷ್ಯಾದಿಂದ ಆದ ತೈಲ ಅಮದು ಶೇ. 15ರಷ್ಟು ಕಡಿಮೆ ಆಗಿದೆ.
ರಷ್ಯಾ ದೇಶ ಜನವರಿಯಲ್ಲಿ ತನ್ನ ಕಚ್ಛಾ ತೈಲವನ್ನು ಬ್ಯಾರಲ್ಗೆ ಸರಾಸರಿಯಾಗಿ 60 ಡಾಲರ್ನಂತೆ ಮಾರುತ್ತಿತ್ತು. ಮಾರುಕಟ್ಟೆ ದರಕ್ಕಿಂತ 22 ಡಾಲರ್ನಷ್ಟು ಕಡಿಮೆ ಬೆಲೆಗೆ ಅದು ನೀಡುತ್ತಿತ್ತು. ಈಗ ಅದು ಬ್ಯಾರಲ್ಎ 86 ಡಾಲರ್ನಂತೆ ಮಾರುತ್ತಿದೆ. ಡಿಸ್ಕೌಂಟ್ ಪ್ರಮಾಣ 22 ಡಾಲರ್ ಇದ್ದದ್ದು 7 ಡಾಲರ್ಗೆ ಇಳಿದಿದೆ.