
ಲಕ್ನೋ: ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ʼಜೈ ಶ್ರೀರಾಮ್ʼ ಎಂದ ವಿದ್ಯಾರ್ಥಿಯನ್ನು ವೇದಿಕೆಯಿಂದ ಕೆಳಗಿಳಿಸಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಡೆದಿದೆ.
ಗಾಜಿಯಾಬಾದ್ ನ ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲ್ಚರಲ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬ ಪ್ರದರ್ಶನ ನೀಡಲು ವೇದಿಕೆಗೆ ಹತ್ತಿ ಮಾತಿನ ಆರಂಭದಲ್ಲಿ ʼಜೈ ಶ್ರೀರಾಮ್ ಸ್ನೇಹಿತರೇʼ ಎಂದಿದ್ದಾನೆ. ಈ ಮಾತನ್ನು ಕೇಳಿದ ಶಿಕ್ಷಕಿ ಮಮತಾ ಗೌತಮ್ ಕೂಡಲೇ ವಿದ್ಯಾರ್ಥಿಗೆ ವೇದಿಕೆಯಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ.
“ಇದೊಂದು ಸಾಂಸ್ಕೃತಿಕ ಕಾರ್ಯಕ್ರಮ, ಇಂತಹ ಮಂತ್ರಘೋಷಗಳಿಗೆ ಅವಕಾಶವಿಲ್ಲ” ಎಂದು ಶಿಕ್ಷಕರು ಹೇಳಿದ್ದಾರೆ.

ಈ ಘಟನೆಯ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಣಗೊಂಡಿದ್ದು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ಕುರಿತು ಮಾತನಾಡಿರುವ ಗಾಜಿಯಾಬಾದ್ ಪೊಲೀಸ್ ಆಯುಕ್ತರು, ಈ ಕುರಿತು ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ರಾಸಿಂಗ್ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳು ಪ್ರದರ್ಶನ ನೀಡುವ ಮುನ್ನ ಅವರನ್ನು ವೇದಿಕೆಯಿಂದ ಕೆಳಗಿಳಿಸಿದ ಕಾರಣಕ್ಕಾಗಿ ಶಿಕ್ಷಕಿ ಮಮತಾ ಗೌತಮ್ ಮತ್ತು ಇನ್ನೊಬ್ಬ ಪ್ರಾಧ್ಯಾಪಕಿ ಶ್ವೇತಾ ಶರ್ಮಾ ಅವರನ್ನು ಅಮಾನತು ಮಾಡಲಾಗಿದೆ.