
ತಮಿಳುನಾಡಿನ ಶಿವಕಾಶಿಯಲ್ಲಿರುವ ಎರಡು ಪಟಾಕಿ ಘಟಕಗಳಲ್ಲಿ ಪಟಾಕಿ ಪರೀಕ್ಷೆ ನಡೆಸುವಾಗ ಸ್ಫೋಟಗೊಂಡಿದ್ದು, ಈ ದುರ್ಘಟನೆಯಲ್ಲಿ ಒಂಬತ್ತು ಮಹಿಳೆಯರು ಸೇರಿದಂತೆ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮೃತರಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ₹ 3 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಚೆನ್ನೈ ಅಕ್ಚೋಬರ್17 ತಮಿಳುನಾಡಿನ (Tamil Nadu) ಶಿವಕಾಶಿಯ (Sivakasi) ಎರಡು ಪಟಾಕಿ ಚಿಲ್ಲರೆ ಅಂಗಡಿಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಮಹಿಳೆಯರು ಸೇರಿದಂತೆ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ. ಪಟಾಕಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಚಿಲ್ಲರೆ ಮಾರಾಟ ಮಳಿಗೆಗಳು ಮಾನ್ಯ ಪರವಾನಗಿ ಹೊಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮೃತರಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ₹ 3 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಶಿವಕಾಶಿಯ ಪಟಾಕಿ ಘಟಕದಲ್ಲಿ ಹಠಾತ್ ಸ್ಫೋಟದಲ್ಲಿ ಏಳು ಸುಟ್ಟ ದೇಹಗಳನ್ನು ಹೊರ ತೆಗೆದಿದ್ದೇವೆ. ಅವರ ಗುರುತುಗಳನ್ನು ಇನ್ನೂ ಪತ್ತೆ ಹಚ್ಚಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಕಾರ್ಮಿಕರು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ಸಿಬ್ಬಂದಿಯನ್ನು ಸೇವೆಯಲ್ಲಿ ನಿರತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿರುದುನಗರ ಜಿಲ್ಲೆಯಲ್ಲಿ ಮೊದಲ ಸ್ಫೋಟ ಸಂಭವಿಸಿದ್ದು, ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅದೇ ಜಿಲ್ಲೆಯ ಕಮ್ಮಪಟ್ಟಿ ಗ್ರಾಮದ ಮತ್ತೊಂದು ಘಟಕದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೊನ್ನೆ ಅಕ್ಟೋಬರ್ 9 ರಂದು ತಮಿಳುನಾಡಿನ ಅರಿಯಲೂರ್ ಜಿಲ್ಲೆಯ ಪಟಾಕಿ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹತ್ತು ಜನರು ಸಾವಿಗೀಡಾಗಿದ್ದರು. ದೀಪಾವಳಿಗೂ ಮುನ್ನ ತಮಿಳುನಾಡಿನ ಕಾರ್ಖಾನೆಗಳಲ್ಲಿ ಪಟಾಕಿ ಉತ್ಪಾದನೆ ಹೆಚ್ಚಾಗಿದೆ.