
ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಶರಣ್ ಪಂಪ್ವೆಲ್ ಷರತ್ತು ಬದ್ಧ ಜಾಮೀನನ ಮೇಲೆ ಹೊರಗಿದ್ದಾರೆ. ಇದೀಗ ನಡೆಯಲಿರುವ ಹಿಂದೂ ಸಮಾವೇಶಕ್ಕೆ ಆಗಮಿಸಿ ಪ್ರಚೋದನಕಾರಿ ಹೇಳಿಕೆ ನೀಡುವ ಸಾಧ್ಯತೆ ಹಿನ್ನೆಲೆ ಉಡುಪಿ ಜಿಲ್ಲೆಗೆ ಶರಣ್ ಪಂಪ್ವೆಲ್ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.

ಉಡುಪಿ, ಅ.10: ಚಿತ್ರದುರ್ಗದಲ್ಲಿ ಆರಂಭವಾದ ವಿಶ್ವ ಹಿಂದೂ ಪರಿಷತ್- ಬಜರಂಗದಳ (VHP) ಬೃಹತ್ ಶೌರ್ಯ ಯಾತ್ರೆಯು ಉಡುಪಿಯಲ್ಲಿ ನಡೆಯುವುದು,ಬೃಹತ್ ಹಿಂದೂ ಸಮಾಜೋತ್ಸವದ ಮೂಲಕ ಸಮಾರೋಪಗೊಳ್ಳಲಿದೆ. ಆದರೆ, ಈ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಹಿನ್ನೆಲೆ ವಿಎಚ್ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪವೆಲ್ ಗೆ ಉಡುಪಿ (Udupi) ಜಿಲ್ಲಾ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ವಿಎಚ್ಪಿ ಅಸ್ತಿತ್ವಕ್ಕೆ ಬಂದು 60 ವರ್ಷ ಪೂರ್ಣ ಹಿನ್ನೆಲೆ ಚಿತ್ರದುರ್ಗದಿಂದ ಆರಂಭಿಸಲಾದ ಶೌರ್ಯ ಯಾತ್ರೆ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಿದೆ. ಈ ಯಾತ್ರೆ ಇಂದು ಸಂಜೆ ಉಡುಪಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವದ ಮೂಲಕ ಸಮಾರೋಪಗೊಳ್ಳಳಿದೆ. ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ.
ಇತ್ತೀಚೆಗಷ್ಟೇ ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಶೌಚಾಶಲಯದಲ್ಲಿರುವ ವಿಡಿಯೋ ಮಾಡಿದ ಪ್ರಕರಣ ಸಂಬಂಧದಲ್ಲಿ ಶರಣ್ ಪಂಪ್ವೆಲ್ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದರು

ಸದ್ಯ ಷರತ್ತುಬದ್ದ ಜಾಮೀನಿನಲ್ಲಿರುವ ಶರಣ್ ಪಂಪ್ವೆಲ್ ಇಂದು ಮತ್ತೆ ಉಡುಪಿ ಸಮಾವೇಶದಲ್ಲಿ ಭಾಗಿಯಾದರೆ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಇದೆ. ಒಂದೊಮ್ಮೆ ಜಾಮೀನು ನಿಯಮ ಉಲ್ಲಂಘನೆ ಮಾಡಿ ಭಾಷಣ ಮಾಡಿದರೆ ಬಂಧನ ಆಗುವ ಸಾಧ್ಯತೆಯೂ ಇದೆ.
ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಿ ಪೊಲೀಸರು ಆದೇಶ ಹೊರಡಿಸಿದ ಬಗ್ಗೆ ತಿಳಿದ ಶರಣ್ ಪಂಪ್ವೆಲ್ ಹೆಜಮಾಡಿಯಿಂದ ಮಂಗಳೂರಿಗೆ ವಾಪಸ್ ಆಗಿದ್ದಾರೆ. ವೇದಿಕೆಯ ಅತಿಥಿಗಳ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಸಮಾವೇಶದಲ್ಲಿ ಶರಣ್ ಪಂಪ್ವೆಲ್ ಭಾಗಿಯಾಗಬೇಕಿದ್ದರು.

ಜಿಲ್ಲೆ ಬಿಟ್ಟು ಹೊರ ಹೋಗದಂತೆ ಷರತ್ತು
ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣ ಸಂಬಂಧ ಶರಣ್ ಪಂಪ್ವೆಲ್ ಗೆ ಉಡುಪಿ ಜಿಲ್ಲಾ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಸ್ವ ವಿಳಾಸದ ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಹೊರ ಹೋಗದಂತೆ ಷರತ್ತು ವಿಧಿಸಿತ್ತು. ಅದರಂತೆ ಶರಣ್ ಪಂಪ್ ವೆಲ್ ಗೆ ಉಡುಪಿ ಪ್ರವೇಶ ನಿರ್ಬಂಧ ವಿಧಿಸಲಾಗಿದ್ದು, ಉಡುಪಿ ಪ್ರವೇಶ ಮಾಡಿದ್ದಲ್ಲಿ ಪೊಲೀಸರು ಪಂಪವೆಲ್ ನನ್ನು ಬಂದಿಸುವ ಸಾಧ್ಯತೆ ಇದೆ.